ಹಳ್ಳಿಗಳಲ್ಲಿ ಸ್ವಚ್ಛತೆಗಾಗಿ ಶ್ರಮಿಸೋಣ

2ANKOLA1
Published on

ಅಂಕೋಲಾ: ಸತ್ಯದ ಪರಿಶೋಧನೆ ಎಂಬ ವಿಸõತ ಉದ್ದೇಶಕ್ಕಾಗಿ ಗಾಂಧೀಜಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ತಮ್ಮ ತಪ್ಪುಗಳಿಂದಲೇ ಕಲಿತು, ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಸತ್ಯದ ಮಾರ್ಗವನ್ನೇ ಸಾಧಿಸಲು ಪ್ರಯತ್ನಿಸಿದ್ದು, ದೇವರೇ ಸತ್ಯ ಎಂದು ಹೇಳುವ ಮೂಲಕ ತಮ್ಮ ನಂಬಿಕೆಗಳ ಮೂಲಕ ಸತ್ಯವೇ ದೇವರು ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಹಿರಿಯ ಪತ್ರಕರ್ತ ಗಂಗಾಧರ ಹೀರೆಗುತ್ತಿ ಹೇಳಿದರು.


ಕನ್ನಡ ಸಾಹಿತ್ಯ ಪರಿಷತ್ತು ಉ.ಕ. ಹಾಗೂ ಅಂಕೋಲಾ ಘಟಕ ಮತ್ತು ಕೆಎಲ್​ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ‘ಗಾಂಧಿ ಅಂದು ಇಂದು ಮುಂದು’ ಅನುಸಂಧಾನ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ವಿಶ್ರಾಂತ ಪ್ರಾಚಾರ್ಯ ಡಾ. ಮಹೇಶ ಗೋಳಿಕಟ್ಟೆ ಬಹುಮಾನ ವಿತರಿಸಿ ಮಾತನಾಡಿ, ಗಾಂಧೀಜಿ ಅವರ ಆದರ್ಶ ಮತ್ತು ಮೌಲ್ಯಗಳು ನಮ್ಮ ದೇಶ ಮತ್ತು ಸಮಾಜಕ್ಕೆ ಬಹಳ ಪ್ರಸ್ತುತವಾಗಿವೆ. ಯುವಕರು ಮತ್ತು ವಿದ್ಯಾರ್ಥಿಗಳು ಗಾಂಧಿ ಜಯಂತಿ ಅಂಗವಾಗಿ ಹಳ್ಳಿ- ಹಳ್ಳಿಗಳಲ್ಲಿ ಸ್ವಚ್ಛತೆಗಾಗಿ ಶ್ರಮಿಸಬೇಕು ಎಂದರು.


ಕಸಾಪಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿಯವರ ಜೀವನದಲ್ಲಿ ಸತ್ಯಕ್ಕೆ ಪ್ರಥಮ ಸ್ಥಾನವಾದರೆ, ಅಹಿಂಸೆಗೆ ದ್ವಿತೀಯ ಸ್ಥಾನ. ಅವರ ಕಲ್ಪನೆಯಲ್ಲಿ ಜಾತಿ ರಹಿತ ಹಾಗೂ ವರ್ಗ ರಹಿತ ಸಮಾಜ ಮಾಡುವ ಹಂಬಲ ಹೊಂದಿದ್ದವರು. ಸಮಸ್ಯೆ ದೊಡ್ಡದಾಗಿರಲಿ, ಸಣ್ಣದಾಗಿರಲಿ, ಪರಿಣಾಮಕಾರಿಯೂ ನೂತನವೂ ಆಗಿರುತ್ತಿತ್ತು. ಹೊಸ ಪ್ರಯೋಗಗಳಿಂದ ಹೊಳೆಯುತ್ತಿದ್ದ ಸತ್ಯಾಂಶಗಳಿಗೆ ಅವರೆಂದು ಕಣ್ಣು ಮುಚ್ಚಿಕೊಂಡವರಲ್ಲ ಎಂದರು.


ಇದೇ ವೇಳೆ ಮಹಾತ್ಮ ಗಾಂಧೀಜಿಯವರ ಶೈಕ್ಷಣಿಕ ಚಿಂತನೆ ಮತ್ತು ಪ್ರಸ್ತುತ ಶೈಕ್ಷಣಿಕ ಸ್ಥಿತಿಗತಿಯ ಕುರಿತು ಜಿಲ್ಲಾ ಮಟ್ಟದ ಅಂತರ್ ಕಾಲೇಜ್ ಪ್ರಬಂಧ ಸ್ಪರ್ಧೆಯಲ್ಲಿ ಕೆಎಲ್​ಇ ಕಾಲೇಜಿನ ಚೈತ್ರಾ ಗಜಾನನ ಆಚಾರಿ (ಪ್ರಥಮ), ಕುಮಟಾ ಕಮಲಾ ಬಾಳಿಗ ಕಾಲೇಜಿನ ತೇಜಾ ನಾಯ್ಕ (ದ್ವಿತೀಯ), ಜಿ.ಸಿ. ಕಾಲೇಜಿನ ಸೃಷ್ಟಿ ನಾಯಕ (ತೃತೀಯ) ಮತ್ತು ಕೆಎಲ್​ಇ ಕಾಲೇಜಿನ ಪ್ರತೀಕ ನಾಯಕ ಸಮಾಧಾನಕರ ಬಹುಮಾನ ವಿತರಿಸಲಾಯಿತು.


ಕೆಎಲ್​ಇ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ಉಪನ್ಯಾಸ ನೀಡಿದರು. ನಿವೃತ್ತ ಮುಖ್ಯೋಧ್ಯಾಪಕಿ ಸುಶೀಲಾ ಎಸ್. ಆಗೇರ ಮಾತನಾಡಿದರು. ಕಸಾಪ ಅಂಕೋಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಪ್ರಾಸ್ತಾವಿಕರವಾಗಿ ಮಾತನಾಡಿದರು.


ರಕ್ಷಿತಾ ಸಂಗಡಿಗರು ಪ್ರಾರ್ಥಿಸಿ, ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಅಂಕೋಲಾ ಘಟಕದ ಕಸಾಪ ಗೌರವ ಕಾರ್ಯದರ್ಶಿ ಜಗದೀಶ ಜಿ. ನಾಯಕ ಹೊಸ್ಕೇರಿ ಸ್ವಾಗತಿಸಿದರು. ಪ್ರ. ಶಿಕ್ಷಣಾರ್ಥಿ ಮಾನಸಾ ನಾಯ್ಕ, ಉಪನ್ಯಾಸಕಿ ಡಾ. ಪುಷ್ಪಾ ನಾಯ್ಕ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕಿರಿಯ- ಹಿರಿಯ ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net