

ಹನೂರು: ಶಾಲಾ ಹಂತದಲ್ಲೇ ಓದಿನ ಕಡೆ ಆಸಕ್ತಿ ವಹಿಸುವುದರಿಂದ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬುದಕ್ಕೆ ಹಳೇ ವಿದ್ಯಾರ್ಥಿಗಳು ಸಾಕ್ಷಿ ಎಂದು ಮಳವಳ್ಳಿಯ ದೊಡ್ಡಬೂವಳ್ಳಿ ಪ್ರೌಢಶಾಲೆಯ ಶಿಕ್ಷಕ ನಾಗೇಂದ್ರ ಮೂರ್ತಿ ಹೇಳಿದರು.
ತಾಲೂಕಿನ ಶಾಗ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ 2014 ನೇ ಸಾಲಿನ ವಿದ್ಯಾರ್ಥಿಗಳು ಶಿಕ್ಷಕರಿಗೆ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿರುತ್ತಾರೆ. ಶಿಕ್ಷಕರ ಬೋಧನೆ ಯಶಸ್ಸು ಕಾಣಬೇಕಾದರೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಧನಾತ್ಮಕತೆಯನ್ನು ಹೊಂದಿರಬೇಕು. ಭವಿಷ್ಯವನ್ನು ರೂಪಿಸಿಕೊಳ್ಳುವುದರತ್ತ ಚಿಂತಿಸಬೇಕು. ಹೀಗಾದಾಗ ಶಿಕ್ಷಣ ನೀಡಿದ್ದು ಸಾರ್ಥಕತೆ ಎನಿಸುತ್ತದೆ. ಇದರಲ್ಲಿ ಹಳೇ ವಿದ್ಯಾರ್ಥಿಗಳು ಓದಿಗೆ ಹೆಚ್ಚು ಒತ್ತು ನೀಡಿ ಉದ್ಯೋಗ ಪಡೆದುಕೊಳ್ಳುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡಿರುವುದು ಸಂತಸದ ವಿಷಯ. ಇದರಿಂದ ಶಿಕ್ಷಕರ ಗೌರವ ಹೆಚ್ಚಿದಂತಾಗಿದೆ. ಗುರುವಂದನಾ ಕಾರ್ಯಕ್ರಮ ಆಯೋಜಿಸಿ ಮಾನವೀಯತೆ ಬೆಳೆಸಿಕೊಂಡಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಮಲ್ಲಿಕ್ (ತೆರಕಣಾಂಬಿ), ಸತೀಶ್ (ಮಂಗಲ), ನಿರ್ಮಲಾ (ಕೆಸ್ತೂರು), ವೀರಣ್ಣ (ದಾವಣಗೆರೆ) ರಾಚಪ್ಪ (ಮಣಗಳ್ಳಿ), ಮಧುಸೂದನ್ (ಅಜ್ಜೀಪುರ), ಮುಖ್ಯ ಶಿಕ್ಷಕ ಶಿವಕುಮಾರ್, ಶಿಕ್ಷಕಿ ರೇಖಾ ಇದ್ದರು.