ಕಾಡು ಬೆಳೆಸುವ ಸಂಕಲ್ಪ ಮಾಡೋಣ

5ark2
ಅರಕಲಗೂಡು ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣಾ ಕಾರ್ಯಕ್ರಮದಲ್ಲಿ ಸಸಿ ನೆಡಲಾಯಿತು. ಅನಿಲ್ ಕುಮಾರ್, ನರಸೇಗೌಡ, ನಿಂಗೇಗೌಡ, ವಿಶ್ವಾಸ್ ಇತರರಿದ್ದರು.
Published on

ಅರಕಲಗೂಡು: ಕಾಡು ಬೆಳೆಸಿ ನಾಡು ಉಳಿಸುವ ಸಂಕಲ್ಪವನ್ನು ಯುವಜನತೆ ಮಾಡದಿದ್ದರೆ ಮುಂದಿನ ಪೀಳಿಗೆ ಅನಾರೋಗ್ಯಕರವಾದ ಸಮಾಜದಲ್ಲಿ ಜೀವಿಸಬೇಕಾಗುತ್ತದೆ ಎಂದು ಎಸ್‌ಬಿಐ ಶಾಖೆ ವ್ಯವಸ್ಥಾಪಕ ಅನಿಲ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಗತಿ ಹೊಂದಿದ ಹಾಗೂ ಪ್ರಗತಿಶೀಲ ದೇಶಗಳು ಜಾಗತಿಕವಾಗಿ ಪ್ರಬಲ ಆರ್ಥಿಕ ಹಾಗೂ ಸೈನಿಕ ಶಕ್ತಿಯಾಗಿ ಬೆಳೆಯುವ ಸ್ಪರ್ಧೆಯಲ್ಲಿ ಮಗ್ನರಾಗಿದ್ದಾರೆಯೇ ಹೊರತು ಪರಿಸರ ನಾಶದ ಬಗ್ಗೆ ಗಮನ ಹರಿಸದಿರುವುದೇ ಇಡೀ ಪ್ರಪಂಚದಾದ್ಯಂತ ಪರಿಸರ ಅಸಮತೋಲನಕ್ಕೆ ಕಾರಣವಾಗಿದೆ. ಈಗಲಾದರೂ ನಾವೆಲ್ಲ ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ದೊಡ್ಡ ಅನಾಹುತ ಅನುಭವಿಸಬೇಕಾಗುತ್ತದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನರಸೇಗೌಡ ಮಾತನಾಡಿ, ಪ್ರತಿಯೊಬ್ಬರೂ ಹತ್ತು ಗಿಡಗಳನ್ನು ನೆಟ್ಟು ಕಾಡು ಬೆಳೆಸಿದರೆ ನಾಡು ಸಮೃದ್ಧಿಯಾಗಿರುತ್ತದೆ. ಯುವ ಪೀಳಿಗೆ ಈ ಸಂದರ್ಭದಲ್ಲಿ ಜಾಗೃತರಾಗದಿದ್ದರೆ ಪ್ರಪಂಚದ ಆಸ್ತಿತ್ವ ಬುಡಮೇಲಾಗುತದೆ. ಕಾರ್ಯಕ್ರಮಗಳಲ್ಲಿ ಮಾತ್ರ ಪರಿಸರದ ಬಗ್ಗೆ ಮಾತನಾಡಿ ಗಿಡಗಳನ್ನು ವಿತರಿಸಿದರೆ ಸಾಲದು, ಅವುಗಳ ಪೋಷಣೆ ಕೂಡ ಮುಖ್ಯ ಎಂದು ಹೇಳಿದರು.

ಪ್ರಾಂಶುಪಾಲೆ ಗಾಯತ್ರಿ ಮಾತನಾಡಿ, ಕಾಲೇಜು ಮೈದಾನದಲ್ಲಿ ಗಿಡಗಳನ್ನು ಪ್ರತಿ ವಿದ್ಯಾರ್ಥಿಗೆ ದತ್ತು ನೀಡುವ ಮೂಲಕ ಗಿಡಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿಶ್ವಾಸ್, ಮಂಜುಳ, ಉಪನ್ಯಾಸಕರಾದ ಲಾಡಪ್ಪ, ಉಷಾ, ಹೇಮಾ, ಮಹೇಶ್, ತೇಜಶ್ವಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net