ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಂಘಟಿತರಾಗಿ

ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಂಘಟಿತರಾಗಿ
Published on

ಹಾಸನ: ಕಾವೇರಿ 2.0 ತಂತ್ರಾಂಶ ಸೇರಿ ಸರ್ಕಾರದ ನೂತನ ನಿಯಮಗಳಿಂದ ಭಾರಿ ತೊಂದರೆಯಾಗುತ್ತಿದ್ದು, ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಂಘಟಿತರಾಗುವುದು ಮುಖ್ಯವೆಂದು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ (ದಸ್ತು) ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ಡಿ.ಕೆ.ಸಂಗಮೇಶ್ ಯಲಿಗಾರ್ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಒಕ್ಕೂಟದ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಪತ್ರ ಬರಹಗಾರರ ವೃತ್ತಿಯನ್ನು ಹತ್ತಿಕ್ಕುವ ಕೆಲಸಕ್ಕೆ ಕೈ ಹಾಕಿದೆ. ವೃತ್ತಿ ಉಳಿಸಿಕೊಳ್ಳಲು ಪತ್ರ ಬರಹಗಾರರು ಸಂಘಟಿತರಾಗಬೇಕು. ಕಾವೇರಿ 2.0 ತಂತ್ರಾಂಶದಲ್ಲಿ ದಸ್ತಾವೇಜುಗಳ ಬಗ್ಗೆ ಯಾವ ತಿಳಿವಳಿಕೆ ಹೊಂದದವರು ಸಹ ದಾಖಲಾತಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿ, ವೃತ್ತಿನಿರತ ಪತ್ರ ಬರಹಗಾರರಿಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿದರು.

ಸೆ.14ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಹಾಲ್‌ನಲ್ಲಿ ರಾಜ್ಯದ ಪತ್ರ ಬರಹಗಾರರ ಸರ್ವ ಸದಸ್ಯರ ಸಭೆ ಹಮ್ಮಿಕೊಂಡಿದ್ದು, ತಪ್ಪದೆ ಭಾಗವಹಿಸಬೇಕು. ಸರ್ಕಾರದ ನಿಯಮಗಳಿಂದ ಆಗುತ್ತಿರುವ ತೊಂದರೆ ಕುರಿತು ಚರ್ಚಿಸಿ ನಿರ್ಣಯ ಮಂಡಿಸಲು ಸಭೆ ಮಹತ್ವದ್ದಾಗಿದೆ ಎಂದು ಹೇಳಿದರು.

ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಎನ್. ನವೀನ್‌ಕುಮಾರ್ ಮಾತನಾಡಿ, ಪತ್ರ ಬರಹಗಾರರು ಒಕ್ಕೂಟದ ಸದಸ್ಯತ್ವ ಪಡೆದು ಶಕ್ತಿ ತುಂಬಬೇಕೆಂದು ಕೋರಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಧರ್ಮರಾಜ್ ಏಕಬೋಟೆ ಅವರು, ಪತ್ರ ಬರಹಗಾರರ ವೃತ್ತಿ ಬೆಳೆದು ಬಂದ ದಾರಿ ಮತ್ತು ಪ್ರಸ್ತುತ ಸವಾಲುಗಳ ಕುರಿತು ಚರ್ಚೆ ನಡೆಸಿದರು.

ಜಿಲ್ಲಾ ಪತ್ರ ಬರಹಗಾರ ಜಿ. ಕೃಷ್ಣ ಮಾತನಾಡಿ, ಜಿಲ್ಲೆಯ ಪತ್ರಗಾರರ ಸಹಕಾರದಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಸರ್ಕಾರಕ್ಕೆ ಒತ್ತಡ ಹೇರಿ ನ್ಯಾಯ ಪಡೆಯಬಹುದು ಎಂದರು.

ಒಕ್ಕೂಟದ ಖಜಾಂಚಿ ಡಿ.ಆರ್.ಗಿರಿರಾಜು, ಜಿಲ್ಲಾ ಪತ್ರ ಬರಹಗಾರರಾದ ಜಿ.ತುಳಸಿಪ್ರಸಾದ್, ಸಿ.ಎಲ್.ರಮೇಶ್, ರೇಖಾ ಪುಟ್ಟಸ್ವಾಮಿ, ನುಗ್ಗೇಹಳ್ಳಿ, ಬಾಣಾವರ ಹಾಗೂ ಎಲ್ಲ ತಾಲೂಕಿನ ಉಪ ನೋಂದಣಿ ಕಚೇರಿ ವ್ಯಾಪ್ತಿಯ ಪತ್ರ ಬರಹಗಾರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net