ಅಂಬೇಡ್ಕರ್ ಸಿದ್ಧಾಂತ ಅನುಸರಿಸೋಣ

02 SARAG 2
Published on

ಸರಗೂರು: ಸಾಮಾಜಿಕ ಅಸಮಾನತೆ, ಜಾತೀಯತೆ, ಆರ್ಥಿಕ, ಶೈಕ್ಷಣಿಕ ಹಾಗೂ ಮೌಢ್ಯಗಳ ವಿರುದ್ಧ ಹೋರಾಡಿದ ಮಹಾ ಮಾನವತಾವಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣ ಮಾಡುದರ ಜತೆಗೆ ಅವರ ಸಿದ್ಧಾಂತ ಅನುಸರಿಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆಯ ಬಳ್ಳೇ ವಲಯ ಅರಣ್ಯಾಧಿಕಾರಿ ಮಧುದೇವಯ್ಯ ಯುವಕರಿಗೆ ಕಿವಿಮಾತು ಹೇಳಿದರು.

ಪಟ್ಟಣದ ನಾಲ್ಕನೇ ವಾರ್ಡಿನ ಜನತಾ ಬಡಾವಣೆಯ ಜ್ಞಾನ ಸೂರ್ಯ ಯೂತ್ ಕ್ಲಬ್ ಸಂಘದ ವತಿಯಿಂದ ಆಯೋಜಿಸಿದ್ದ ಭಾರತ ರತ್ನ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಭಾನುವಾರ ವಲಯ ಅರಣ್ಯ ಅಧಿಕಾರಿ ಮಧು ದೇವಯ್ಯ ಹಾಗೂ ವಾರ್ಡಿನ ಯಜಮಾನರು ಅನಾವರಣಗೊಳಿಸಿದರು.

ಸ್ವಾತಂತ್ರೃ ಬಂದು ದಶಕಗಳೇ ಕಳೆದಿದ್ದರೂ ಹಿಂದುಳಿದ ಜಾತಿಗಳು ಹಲವು ಸೌಲಭ್ಯಗಳಿಂದ ವಂಚಿತವಾಗಿವೆ. ಇದಕ್ಕೆ ಕಾರಣ ಈ ದೇಶವನ್ನಾಳುತ್ತಿರುವ ಸರ್ಕಾರಗಳು. ಈ ಜನಾಂಗಗಳನ್ನು ಮುಖ್ಯವಾಹಿನಿಗೆ ತರುವುದರ ಬಗ್ಗೆ ಯೋಚಿಸದೆ ಕೇವಲ ಅಂಬೇಡ್ಕರ್ ವಿಚಾರಧಾರೆಗಳನ್ನು ದಲಿತರ ವೋಟ್ ಬ್ಯಾಂಕ್‌ಗಾಗಿ ಬಳಸುತ್ತಿವೆ. ಅಂಬೇಡ್ಕರ್ ಅವರಂತಹ ಮಹಾಪುರುಷರ ಹಾದಿಯಲ್ಲಿ ನಡೆದು ನಾವೆಲ್ಲರೂ ವಿಶ್ವ ಮಾನವರಾಗೋಣ ಎಂದರು.

ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಎಸ್.ಟಿ.ಸಣ್ಣಸ್ವಾಮಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು, ಭಾರತದ ಕಾನೂನು ಸುವ್ಯವಸ್ಥೆ, ಅಸ್ಪಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯೆ ಚಂದ್ರಕಲಾ ರಾಜಣ್ಣ, ವಾರ್ಡಿನ ಯಜಮಾನರಾದ ಭೋಗಯ್ಯ, ಗಡಿ ಯಜಮಾನ ರಂಗಯ್ಯ, ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಚಿಕ್ಕಮ್ಮ, ಸುಬ್ರಮಣ್ಯ, ಡಿಎಸ್‌ಎಸ್ ತಾಲೂಕು ಸಂಘಟನಾ ಸಂಚಾಲಕ ಹುಚ್ಚಯ್ಯ, ದೊಡ್ಡಬೈರ, ಶಿವಮೂರ್ತಿ, ಪರಶಿವ, ಬಣ್ಣಯ್ಯ, ಮಹೇಶ್, ಶ್ರೀಕಂಠ, ಗೋಪಾಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net