ಸಾಂಸ್ಕೃತಿಕ ವೈಭವ ಮೆರೆಯುವಂತೆ ದಸರಾ ಆಚರಿಸೋಣ

10_Ark_Dasara Meeting
Published on

ಅರಕಲಗೂಡು: ಪಟ್ಟಣದಲ್ಲಿ ದಸರಾ ಅಂಗವಾಗಿ 9 ದಿನಗಳ ಕಾಲ ನಡೆಯುವ ವಿವಿಧ ಉತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಸಾಂಸ್ಕೃತಿಕ ವೈಭವ ಮೆರೆಯುವಂತೆ ಶಾಸಕ ಎ.ಮಂಜು ಹೇಳಿದರು.

ಪಟ್ಟಣದ ಚಿಲುಮೆ ಮಠದ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅರಕಲಗೂಡು ದಸರಾಕ್ಕೆ ತನ್ನದೇ ಇತಿಹಾಸವಿದೆ. ಮಡಿಕೇರಿಗೆ ತೆರಳಿ ದಸರಾ ವೀಕ್ಷಿಸುವುದು ಎಲ್ಲರಿಗೂ ಕಷ್ಟಕರ. ಆದ್ದರಿಂದಲೇ ಅರಕಲಗೂಡಿನಲ್ಲಿ ದಸರಾ ಹಬ್ಬವನ್ನು ಪ್ರಾರಂಭಿಸಲಾಯಿತು. ಈ ಬಾರಿ 9 ದಿನಗಳ ಪೂಜಾ ಕಾರ್ಯಕ್ರಮವನ್ನು ಪಟ್ಟಣದ ಎರಡು ವಾರ್ಡ್ ಗಳನ್ನು ಸೇರಿಸಿ ಪ್ರತಿದಿನ ಒಂದೊಂದು ವಾರ್ಡಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಧಾರ್ಮಿಕ ಹಬ್ಬವಾದ್ದರಿಂದ ಪಟ್ಟಣದೊಳಗೇ ವಾರ್ಡ್ ಮಟ್ಟದಲ್ಲಿ ನಡೆಸುವುದು ಸೂಕ್ತ. ರೈತ ದಸರಾವನ್ನು ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತದೆ. ವಿಜಯದಶಮಿಯನ್ನು ಹೊರತುಪಡಿಸಿ ಉಳಿದ ದಿನಗಳ ದಸರಾ ಕಾರ್ಯಕ್ರಮಗಳ ಜವಾಬ್ದಾರಿ ಸಂಬಂಧಿತ ವಾರ್ಡ್ ಸದಸ್ಯರು ಮತ್ತು ಇಲಾಖೆಗಳ ಅಧಿಕಾರಿಗಳು ನಿರ್ವಹಿಸಬೇಕು ಎಂದರು.

ರೈತ ಸಂಘದ ಅಧ್ಯಕ್ಷ ಭುವನೇಶ್ ಮಾತನಾಡಿ, ರೈತ ದಸರಾವನ್ನು ಕ್ರೀಡಾಂಗಣದಲ್ಲಿ ನಡೆಸುವುದರಿಂದ ಜಾಗದ ಅಭಾವದ ಸಮಸ್ಯೆ ತಪ್ಪುತ್ತದೆ. ಇದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ನೌಕರರ ದಸರಾವನ್ನು ಪ್ರತ್ಯೇಕವಾಗಿ ನಡೆಸುವುದಕ್ಕಿಂತ ಇತರ ದಸರಾ ಕಾರ್ಯಕ್ರಮಗಳ ಜತೆಗೂಡಿಸಿ ನಡೆಸಬೇಕು. ಹಬ್ಬದ ರಜೆ ಹಾಗೂ ಸಿದ್ಧತೆಯ ಕಾರಣದಿಂದ ನೌಕರರಿಂದ ಹೆಚ್ಚಿನ ಮಟ್ಟದ ಪಾಲ್ಗೊಳ್ಳುವಿಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಎಲ್ಲ ದಸರಾ ಕಾರ್ಯಕ್ರಮಗಳ ಜತೆಗೆ ನೌಕರರ ದಸರಾವನ್ನೂ ಸೇರಿಸಿ ನಡೆಸಿದರೆ ಉತ್ತಮ ಎಂದರು.

ಪಪಂ ಮಾಜಿ ಅಧ್ಯಕ್ಷ ಮಂಜು ಶೆಟ್ಟಿಗೌಡ ಮಾತನಾಡಿ, ಪರಿಸರ ದಸರಾವನ್ನು ಜಾಥಾಗೆ ಮಾತ್ರ ಸೀಮಿತಗೊಳಿಸದೆ, ಗಿಡಗಳ ವಿತರಣೆ ಮಾಡುವ ಮೂಲಕ ಹಬ್ಬಕ್ಕೆ ಅರ್ಥಪೂರ್ಣವಾಗಿ ಆಚರಿಸಬಹುದು. ಜತೆಗೆ ಈ ಬಾರಿ ದಸರಾ ಪಶಸ್ತಿಗೆ ಪದ್ಮಶ್ರೀ ಪುರಸ್ಕೃತರಾದ ಅರಕಲಗೂಡು ಮೂಲದ ಸೂರ್ಯ ಪ್ರಕಾಶ್ ಅವರನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ಮಾತನಾಡಿ, ಕಳೆದ ವರ್ಷ ದಸರಾ ವಿಜೃಂಭಣೆಯಿಂದ ನೆರವೇರಿತ್ತು. ಈ ಬಾರಿ ಪ್ರತಿಯೊಂದು ವಾರ್ಡಿನಲ್ಲೇ ದಸರಾ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಯೊಂದು ವಾರ್ಡಿನ ದಸರಾ ಕಾರ್ಯಕ್ರಮವನ್ನು ಆ ವಾರ್ಡಿನ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ. ದಸರಾ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ತಹಸೀಲ್ದಾರ್ ಕೆ.ಸಿ. ಸೌಮ್ಯಾ, ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಭಾನ ಷರೀಫ್, ಸದಸ್ಯೆ ರಶ್ಮಿ ಪ್ರವೀಣ್, ಬಿ.ಎಸ್.ಪಿ. ರಾಜ್ಯ ಕಾರ್ಯಾಧ್ಯಕ್ಷ ಅತ್ನಿ ಹರೀಶ್, ದಸರಾ ಸಮಿತಿ ಕಾರ್ಯದರ್ಶಿ ರವಿ ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ನರಸೇಗೌಡ, ಕೃಷ್ಣೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net