ಅಂಧತ್ವ ನಿವಾರಿಸಲು ಎಲ್ಲರೂ ಕೈ ಜೋಡಿಸಿ

ಅಂಧತ್ವ ನಿವಾರಿಸಲು ಎಲ್ಲರೂ ಕೈ ಜೋಡಿಸಿ
Published on

ಹಾಸನ: ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮುಖ್ಯ. ಕಾರ್ನಿಯ ಕುರುಡುತನವನ್ನು ನಿವಾರಿಸಲು ಎಲ್ಲರೂ ಕೈ ಜೋಡಿಸಿದರೆ ಸಾಧ್ಯವಾಗುತ್ತದೆ ಎಂದು ಹಿಮ್ಸ್‌ನ ನೇತ್ರ ವಿಭಾಗದ ಮುಖ್ಯಸ್ಥರಾದ ಡಾ.ಕವಿತಾ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ಜಿಲ್ಲಾ ಅಂಧತ್ವ ನಿಯಂತ್ರಣಾ ವಿಭಾಗ, ಹಿಮ್ಸ್ ನೇತ್ರ ವಿಭಾಗ, ಲಯನ್ಸ್ ಕ್ಲಬ್ ಹಾಸನ ಯಗಚಿ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 40ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕಾರ್ನಿಯ ಸಂಗ್ರಹಿಸಿ ಐ ಬ್ಯಾಂಕ್ ಹಿಮ್ಸ್ ಹಾಸನ ಇಲ್ಲಿಗೆ ಕಳುಹಿಸಿ ಕೊಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ. ಉಪಕಾರ್ಯದರ್ಶಿ ಬಾಬು, ಒಬ್ಬ ವ್ಯಕ್ತಿಯು ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ಬೆಳಕನ್ನು ನೀಡುತ್ತವೆ. ಆದ್ದರಿಂದ ನೇತ್ರದಾನ ಅತ್ಯುತ್ತಮ ಮಾನವೀಯ ಸೇವೆ ಎಂದು ಹೇಳಿದರು.

ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು ಯಾವುದೇ ಭೇದ ಭಾವವಿಲ್ಲದೆ ಎಲ್ಲರೂ ನೇತ್ರದಾನ ಮಾಡಬಹುದು ಎಂದು ಹೇಳಿದರು. ವೈದ್ಯ ವೃತ್ತಿ ಮಹತ್ವದ್ದು ಆರೋಗ್ಯ ಇಲಾಖೆಯಲ್ಲಿರುವ ಸರ್ಕಾರಿ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಪರಿಚಯಿಸುವುದು ಎಲ್ಲರ ಕರ್ತವ್ಯವೆಂದರು.

ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ.ನಾಗೇಶ್ ಪಿ. ಆರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಕಣ್ಣು ಗುಡ್ಡೆಗಳ ಸಂಗ್ರಹಣೆಯನ್ನು ಹಿಮ್ಸ್ ನೇತ್ರ ವಿಭಾಗದಿಂದ ಮಾತ್ರ ಮಾಡಲಾಗುತ್ತಿದ್ದು, ಈ ಕಾರ್ಯವನ್ನು ಎಲ್ಲ ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಗೆ ವಿಸ್ತರಿಸುವ ಕಾರ್ಯಯೋಜನೆಯನ್ನು ಸಿದ್ಧಪಡಿಸುತ್ತಿರುವುದಾಗಿ ತಿಳಿಸಿದರು.

ಕಳೆದ ವರ್ಷದಿಂದಲೇ ಜಿಲ್ಲೆಯಲ್ಲಿ 23 ಆಶಾಕಿರಣ ಕೇಂದ್ರಗಳನ್ನು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ. ಮಾನವ ಸಂಪನ್ಮೂಲದ ಕೊರತೆಯಿಂದಾಗಿ ಕೆಲವು ಆಶಾಕಿರಣ ಕೇಂದ್ರಗಳು ಸಂಪೂರ್ಣವಾಗಿ, ಕ್ರಿಯಾತ್ಮಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. 29 ಮಂಜೂರಾದ ನೇತ್ರಾಧಿಕಾರಿಗಳ ಹುದ್ದೆಗಳಲ್ಲಿ ಕೇವಲ ಎಂಟು ಹುದ್ದೆಗಳು ಭರ್ತಿ ಇದೆ. 2024-25ರ ಸಾಲಿನಲ್ಲಿ ಹಾಸನ ಜಿಲ್ಲೆಯಲ್ಲಿ ಅಂಧತ್ವ ನಿವಾರಣಾ ಕಾರ್ಯಕ್ರಮದಲ್ಲಿ ಶೇ.90 ಸಾಧನೆಯಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುಳಾ, ಲಯನ್ಸ್ ಕ್ಲಬ್ ಯಗಚಿ ಸಂಸ್ಥೆಯ ಕಾರ್ಯದರ್ಶಿ ಲಯನ್ ಲೋಹಿತ್ ಕುಮಾರ್, ಸ್ವಯಂ ಸೇವಾ ಸಂಸ್ಥೆ ಮತ್ತು ಅಂಧತ್ವ ನಿಯಂತ್ರಣ ವಿಭಾಗದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net