

ಸಿಂಧನೂರು: ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಮುಂದಾಗಬೇಕು. ವೀರಗಾಸೆ ಹಾಗೂ ಡೊಳ್ಳು ಕುಣಿತದ ತರಬೇತಿ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ರಂಗಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಶ್ರೀ ಗವಿಸಿದ್ದೇಶ್ವರ ಜಾನಪದ ಸಾಂಸ್ಕೃತಿಕ ಕಲಾ ಸಂಘ ಹಾಗೂ ತಾಲೂಕು ಕನ್ನಡ ಜಾನಪದ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರಗಾಸೆ ಹಾಗೂ ಡೊಳ್ಳು ಕುಣಿತ ಐದು ದಿನಗಳ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜಾನಪದ ಕಲೆ ಜೀವಂತವಾಗಿಡುವ ಕೆಲಸವಾಗಬೇಕು. ಗ್ರಾಮೀಣ ಭಾಗದಲ್ಲಿ ಇಂಥ ಕಾರ್ಯಕ್ರಮ ನಡೆಸಬೇಕು.
ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ನಮ್ಮ ಮೂಲ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ದೂರಾಗುತ್ತಿದೆ ವಿದ್ಯಾರ್ಥಿಗಳು, ಯುವಜನತೆ ಜನಪದ ಕಲೆಗಳನ್ನು ಉಳಿಸಲು ಮುಂದಾಗಬೇಕು ಎಂದರು.
ಸಂಘದ ಅಧ್ಯಕ್ಷ ಹನುಮೇಶ ಬಾಗೋಡಿ ಮಾತನಾಡಿ, ಗ್ರಾಮೀಣ ಭಾಗದ ಜಾನಪದ ಕಲೆ, ಕ್ರೀಡೆ, ಸಂಸ್ಕೃತಿಯನ್ನು ಬಳಸಿ ನಮ್ಮ ಪರಂಪರೆಯನ್ನು ಮುಂದುವರೆಸುವುದು ಅಗತ್ಯವಿದೆ ಎಂದು ತಿಳಿಸಿದರು.
ಉಸ್ಕಿಹಾಳದ ಶ್ರೀ ಆತ್ಮಾನಂದಸ್ವಾಮೀಜಿ ಮಾತನಾಡಿ, ಹಿಂದಿನಿಂದ ನಮ್ಮ ಹಿರಿಯರು ನಿತ್ಯದ ಕೆಲಸ ಕಾರ್ಯಗಳನ್ನು ಮಾಡುವಾಗ ತಮಗಾದ ಆಯಾಸವನ್ನು ಮರೆಯಲು, ಬೀಸುವ ಪದ, ಹಂತಿಯಪದ, ಸೋಬಾನೆ ಪದ ಮುಂತಾದ ಜಾನಪದ ಹಾಡುಗಳನ್ನು ಹಾಡುತ್ತ ಜನಪದ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅದನ್ನು ಮುಂದುವರೆಸುವ ಜವಾಬ್ದಾರಿ ಯುವಜನತೆಯ ಮೇಲೆ ಇದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಗಸ್ತಿ, ಜಾನಪದ ಕಲಾವಿದ ಅಮರೇಶ ಹಸಮಕಲ್, ಬಸವರಾಜ ಅಂಬಿಗೇರ, ಡೊಳ್ಳು ಕುಣಿತದ ತರಬೇತುದಾರರಾದ ನಾಗಪ್ಪ ಪೂಜಾರಿ ತಿಡಿಗೋಳ, ಬೀರಪ್ಪ ಶಂಭೋಜಿ, ವೀರಗಾಸೆ ತರಬೇತಿದಾರರಾದ ಜೀವಿತಾ ಚಿಕ್ಕಮಗಳೂರು, ಬಸವರಾಜ, ಬೆಟ್ಟಪ್ಪ, ಹನುಮಂತ, ಉಮಾಪತಿ ಕನ್ನಾರಿ ಜಾನಪದ ಗೀತೆಗಳನ್ನು ಹಾಡಿ ಗಮನ ಸೆಳೆದರು.
ಪ್ರಮುಖರಾದ ಬಸವರಾಜ ಗಸ್ತಿ, ಉಮಾಪತಿ ಕನ್ನಾರಿ, ಶಿಕ್ಷಕಿ ಈರಮ್ಮ ತಿಮ್ಮಾಪುರ, ಮುಖ್ಯ ಶಿಕ್ಷಕ ಸಿದ್ದಪ್ಪ ಬಸರಕೋಡ ಇತರರಿದ್ದರು.