ಯುವ ಸಂಶೋಧಕರು ಜನಸಾಮಾನ್ಯರಿಗೆ ವಿಜ್ಞಾನ ತಲುಪಿಸಲಿ

ಯುವ ಸಂಶೋಧಕರು ಜನಸಾಮಾನ್ಯರಿಗೆ ವಿಜ್ಞಾನ ತಲುಪಿಸಲಿ
Published on

ಹಾಸನ: ಭಾರತ ಮೂಲದ ವೈದ್ಯಕೀಯ ಪದ್ಧತಿಯಾದ ಆಯುರ್ವೇದವು ಶೀಘ್ರದಲ್ಲೇ ವಿಶ್ವ ಮಾನ್ಯತೆ ಪಡೆಯುತ್ತದೆ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯ ಡೀನ್ ಡಾ. ಒ.ಆರ್. ನಟರಾಜ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಮಾತನಾಡಿ, ಆಯುರ್ವೇದ ಮಾನವ ಆರೋಗ್ಯಕ್ಕೆ ಮಾತ್ರವಲ್ಲ, ಪ್ರಾಣಿಗಳ ಚಿಕಿತ್ಸೆಯಲ್ಲಿಯೂ ಮಹತ್ತರ ಪಾತ್ರ ವಹಿಸಿದೆ. ಗಜ ಆಯುರ್ವೇದ, ಹಸ್ತಿ ಆಯುರ್ವೇದ ಮುಂತಾದ ಪುರಾತನ ಗ್ರಂಥಗಳು ಅದಕ್ಕೆ ನಿದರ್ಶನ. ಇಂದಿಗೂ ಪಶು ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿದ್ದು, ಯುವ ಸಂಶೋಧಕರು ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ರಾಯಭಾರಿಗಳಾಗಬೇಕೆಂದರು.

ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಚನ್ನವೀರಪ್ಪ ಮಾತನಾಡಿ, 33 ವರ್ಷಗಳ ಹಿಂದೆ ಪುಟ್ಟ ಕಟ್ಟಡದಲ್ಲಿ ಪ್ರಾರಂಭವಾದ ಎಸ್‌ಡಿಎಂ ಆಯುರ್ವೇದ ಕಾಲೇಜು ಇಂದು ದೇಶಾದ್ಯಂತ ಹೆಸರು ಪಡೆದಿರುವುದು ಹೆಮ್ಮೆಯ ವಿಚಾರವೆಂದರು.

ಎಸ್‌ಡಿಎಂ ಕಾಲೇಜು ಪಾಂಶುಪಾಲ ಡಾ.ಶೈಲಜಾ ಮಾತನಾಡಿ, ಆಯುಷ್ ಸಚಿವಾಲಯದ ಮಾರ್ಗಸೂಚಿಯಂತೆ 9 ವರ್ಷಗಳಿಂದ ಆಯುರ್ವೇದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಜನರಿಗಾಗಿ ಮತ್ತು ಭೂಗ್ರಹಕ್ಕಾಗಿ ಆಯುರ್ವೇದ ಎಂಬ ಘೋಷವಾಕ್ಯದಡಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಉತ್ತಮ ಆರೋಗ್ಯಕ್ಕಾಗಿ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯೆಂದರು.

ವಿಶೇಷ ಕಾರ್ಯಕ್ರಮ: ವಿಶ್ವ ಆಯುರ್ವೇದ ದಿನಾಚರಣೆ ಅಂಗವಾಗಿ ಯೋಗ ತರಬೇತಿ, ಆಯುರ್ವೇದ ಆಹಾರ ತಯಾರಿಕೆ, ಉಪನ್ಯಾಸ, ಪ್ರಾತ್ಯಕ್ಷಿಕೆ, ಸ್ವರ್ಣಾಮೃತ ಪ್ರಾಶನ, ರಕ್ತದಾನ ಶಿಬಿರ, ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವೇದಿಕೆ ಕಾರ್ಯಕ್ರಮ ಬಳಿಕ ನಮ್ಮ ನಡಿಗೆ ಆಯುರ್ವೇದ ಕಡೆಗೆ ಎಂಬ ಘೋಷಣೆಯೊಂದಿಗೆ 600ಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ಸಿಬ್ಬಂದಿ ಜಾಗೃತಿ ಜಾಥಾ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net