

ಬೇಲೂರು: ಮಹಿಳೆಯರು ತಮ್ಮ ಸ್ವಾರ್ಥ ಬಿಟ್ಟು ಮುನ್ನಡೆದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಿಳಾ ಸಂಘದಿಂದ ಸೋಮವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಚನ ವೈಭವ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು. ಮಹಿಳೆಯರು ಉತ್ತಮ ಸಾಧನೆ ಮಾಡುವ ಸಂದರ್ಭ ಪ್ರೋತ್ಸಾಹ ನೀಡಬೇಕು. ಅದನ್ನು ಬಿಟ್ಟು ತುಳಿಯುವ ಕೆಲಸ ಮಾಡಬಾರದು.
ಪುರಷರಷ್ಟೇ ಮಹಿಳೆ ಕೂಡ ಸಮಾನಳು ಎಂಬುದು ತಪ್ಪು ಕಲ್ಪನೆ. ಒಬ್ಬ ಮಹಿಳೆಯ ಹಿಂದೆ ಎಲ್ಲ ರೀತಿಯ ಸಹಕಾರ ಧೈರ್ಯ ತುಂಬುವ ಕೆಲಸವನ್ನು ಪುರುಷರು ಮಾಡಿರುತ್ತಾರೆ ಎಂಬುವುದನ್ನು ಮರೆಯಬಾರದು. ಮಹಿಳೆಯರಿಗೆ ಉತ್ತಮ ಅವಕಾಶ ವೇದಿಕೆ ಇದೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.
ನಮ್ಮನ್ನು ನಾವು ಮೊದಲು ಗೌರವಿಸುವ ಕೆಲಸ ಮಾಡಬೇಕಿದೆ. ಈಗ ಎಲ್ಲ ರಂಗದಲ್ಲಿ ಮಹಿಳೆಯರು ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದು ಮುಖ್ಯವಾಗಿ ಹಳೆಬೀಡಿನ ಕೃಷಿಕ ಪ್ರಶಸ್ತಿ ಪಡೆದ ಮಹಿಳೆ ಮಮತಾ ಚಂದ್ರಶೇಖರ್ ಅವರ ಸಾಧನೆ ಶ್ಲಾಘನೀಯವಾಗಿದೆ. ಅವರು ಕಡಿಮೆ ವಿದ್ಯಾಭ್ಯಾಸ ಮಾಡಿದ್ದು, ಚಿಕ್ಕ ವಯಸ್ಸಿನಲ್ಲಿ ಅವರ ಪತಿ ಕಳೆದುಕೊಂಡರೂ ಎದೆಗುಂದದೆ ಕ್ಷೇತ್ರ ಕೃಷಿಯಲ್ಲಿ ಸಾಧನೆ ಮಾಡಿ ಸಂತೃಪ್ತಿ ಕಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಸ್ಕಾರವಿಲ್ಲದೆ ಕೆಲ ವಿದ್ಯಾವಂತ ಮಹಿಳೆಯರು ಸಣ್ಣ ಪುಟ್ಟ ಕೌಟುಂಬಿಕ ವ್ಯಾಜ್ಯಗಳಿಗೆ ನ್ಯಾಯಾಲಯದ ಮೆಟ್ಟಿಲೇರುತ್ತಿರುವುದು ದುರದೃಷ್ಟಕರ. ಅಂತಹವರಿಗೆ ನಮ್ಮ ಸಂಸ್ಕೃತಿ ಸಂಸ್ಕಾರ ಕಲಿಸುವುದು ಅತ್ಯವಶ್ಯಕ ಎಂದರು.
ವೀರಶೈವ ಲಿಂಗಾಯತ ಮಹಿಳಾ ಘಟಕದ ಅಧ್ಯಕ್ಷೆ ವಿಂಪು ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ಕೆಲಸಕ್ಕೆ ಮುಂದಾಗಬೇಕು. ಕೇವಲ ಮಹಿಳಾ ದಿನಾಚರಣೆ ಆಚರಿಸದೆ ನೊಂದವರ ಪಾಲಿಗೆ ಬೆಳಕಾಗಿ ನೆರವಾಗಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಮಾಜದಿಂದ ಗ್ರಾಮೀಣ ಭಾಗಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಕೃಷಿ ಪ್ರಶಸ್ತಿ ಪಡೆದ ಮಮತಾ ಚಂದ್ರಶೇಖರ್ ಅವರನ್ನು ಅಭಿನಂದಿಸಲಾಯಿತು. ಬೆಂಗಳೂರಿನ ನೀಲಾಂಭಿಕ ಮಹಿಳಾ ಸಂಘದ ವತಿಯಿಂದ ವಚನಾ ಗಾಯನ ಏರ್ಪಡಿಸಲಾಗಿತ್ತು.
ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷೆ ಚಂದ್ರಕಲಾ, ತಾಲೂಕು ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ವಿಜಯ್, ಪ್ರಧಾನ ಕಾರ್ಯದರ್ಶಿ ಮದನ್, ಖಜಾಂಚಿ ರಾಜಣ್ಣ ನಿರ್ದೇಶಕರಾದ ಲಕ್ಷ್ಮೀ, ಉಮಾ, ಹೇಮಾ, ಅನ್ನಪೂರ್ಣ, ದ್ರಾಕ್ಷಾಯಿಣಿ, ರೋಹಿಣಿ, ಶಶಿಕಲಾ, ಪ್ರಕಾಶ್ ಅರೇಹಳ್ಳಿ, ನೀಲಾಂಬಿಕೆ, ಪುಷ್ಪ ಇತರರಿದ್ದರು.