

ನಂಜನಗೂಡು: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಬಾಲ ಯೇಸು ದೇವಾಲಯದ ಧರ್ಮಗುರು ಅಂತಪ್ಪ ಮರಿಯಪ್ಪ ಹೇಳಿದರು.
ನಗರದ ಶ್ರೀಕಂಠೇಶ್ವರ ಮಂಗಳ ಮಂಟಪದಲ್ಲಿ ಸೋಮವಾರ ಸ್ಪಂದನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದು, ಸಮಾಜದ ಒಟ್ಟಾರೆ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅಮೂಲ್ಯವಾಗಿದೆ ಎಂದು ಹೇಳಿದರು.
ಮೈಂಡ್ ಮಿರಾಕಲ್ಸ್ ಸಂಸ್ಥೆಯ ಮುಖ್ಯಸ್ಥೆ ಕಾವ್ಯಾ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಸಣ್ಣ ಉದ್ದಿಮೆಗಳು ಅಥವಾ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದಾಗಿದೆ. ಇನ್ನು ಮಹಿಳೆಯರ ಪ್ರಗತಿಗೆ ನೆರವಾಗುವ ಯೋಜನೆಗಳು ಹಾಗೂ ಅಗತ್ಯ ಮಾರ್ಗದರ್ಶನ, ಸಹಕಾರ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆ ವೈದ್ಯೆ ಡಾ.ಎಸ್.ಅನಿತಾ ಮಾತನಾಡಿ, ಕೌಟುಂಬಿಕ ಒತ್ತಡದಲ್ಲಿ ಜೀವನ ನಿರ್ವಹಿಸುವ ಮಹಿಳೆ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ರಕ್ತಹೀನತೆ ಹಾಗೂ ಕ್ಯಾನ್ಸರ್‌ನಂತಹ ರೋಗಗಳು ಮಹಿಳೆಯರನ್ನೇ ಹೆಚ್ಚಾಗಿ ಭಾಧಿಸುತ್ತಿವೆ. ಮಹಿಳೆಯರು ಶಿಕ್ಷಣ ಹಾಗೂ ಸ್ವಾವಲಂಬನೆಯ ಜತೆಗೆ ವೈಯಕ್ತಿಕ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಹೈನುಗಾರಿಕೆಯಲ್ಲಿ ಸಾಧಿಸಿದ ಹೊಸಹಳ್ಳಿ ಗ್ರಾಮದ ರೈತ ಮಹಿಳೆ ಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.
ಕರುಣಾಲಯ ಸಂಸ್ಥೆ ಮುಖ್ಯಸ್ಥೆ ಸೂಸೈ ಮೇರಿ, ಕಮಿಲಾ, ಸ್ಪಂದನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥೆ ಮೇಬಲ್ ಇತರರು ಇದ್ದರು.