ತೃತೀಯ ಲಿಂಗಿಗಳು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿ

ತೃತೀಯ ಲಿಂಗಿಗಳು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿ
Published on

ಹಾಸನ: ದೇಶದ ಯಾವ ರಾಜ್ಯದಲ್ಲೂ ತೃತೀಯ ಲಿಂಗಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಮಾಡುವ ನಿರ್ಧಾರವನ್ನು ಮಾಡಿಲ್ಲ. ಆದರೆ, ನಮ್ಮ ರಾಜ್ಯದಲ್ಲೇ ಮೊದಲ ಬಾರಿಗೆ ಈ ನಿರ್ಧಾರವನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಹೇಳಿದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯ ಕೊಠಡಿ ಸಂಖ್ಯೆ 115ನೇ ರಲ್ಲಿ ನಡೆಯುತ್ತಿದ್ದ ಲಿಂಗತ್ವ ಅಲ್ಪಸಂಖ್ಯಾತ ಸಮೀಕ್ಷೆಯ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿ ತೃತೀಯ ಲಿಂಗಿಗಳೊಂದಿಗೆ ಚರ್ಚಿಸಿದರು. ರಾಜ್ಯದಲ್ಲಿ ಎಷ್ಟು ಜನ ತೃತೀಯ ಲಿಂಗಿಗಳು ಇದ್ದಾರೆ ಎನ್ನುವ ಅಂಕಿ-ಅಂಶಗಳು ಗೊತ್ತಾದರೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಕೆಲಸಗಳನ್ನು ನೀಡಲು ಅನುಕೂಲವಾಗುತ್ತದೆ. ನಿಮ್ಮಲ್ಲಿ ಕೆಲವರು ಭಿಕ್ಷಾಟನೆ ಮಾಡುವುದನ್ನು ಸಹ ತಪ್ಪಿಸಬಹುದು. ಸ್ವಯಂ ಉದ್ಯೋಗಿಗಳಾಗಲು ಅನುಕೂಲವಾಗುತ್ತದೆ. ಎಲ್ಲರೂ ಕಡ್ಡಾಯವಾಗಿ ಈ ಸಮೀಕ್ಷೆಯಲ್ಲಿ ಮಾಹಿತಿ ನೀಡಿ ಎಂದರು.

ನೀವುಗಳು ಈಗಾಲೇ ಕುಟುಂಬದಿಂದ ದೂರವಿದ್ದು, ಮೊದಲೇ ನೊಂದವರಾಗಿದ್ದೀರಿ. ಸಮಾಜದಲ್ಲೂ ತಾರತಮ್ಯವಿದೆ. ಈ ಎಲ್ಲ ನೋವನ್ನು ಅನುಭವಿಸುವ ನಿಮ್ಮನ್ನು ನಮ್ಮ ಸರ್ಕಾರ ಗುರುತಿಸಬೇಕು. ನಿಮ್ಮಲ್ಲಿ ಕೆಲವರು ಮಾತ್ರ ವಿದ್ಯಾವಂತರು ಮತ್ತೆ ಕೆಲವರು ಭಿಕ್ಷಾಟನೆ ಮಾಡುವವರು ಇದ್ದಾರೆ. ಹಾಗಾಗಿ ಎಲ್ಲ ರೀತಿಯಲ್ಲೂ ನಿಮಗೆ ಅನುಕೂಲವಾಗಬೇಕು ಎಂಬುದಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 400 ಜನರಲ್ಲಿ ಕೇವಲ ನೂರು ಜನರಷ್ಟೇ ಸಮೀಕ್ಷೆಯಾಗಿದೆ. ಇದು ಬಹಳ ಕಡಿಮೆಯಾಗಿದೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರನ್ನು ಉಪಯೋಗಿಸಿಕೊಂಡು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net