ವಿದ್ಯೆಯೊಂದಿಗೆ ಮಾನವೀಯ ಮೌಲ್ಯ, ಸನ್ನಡತೆ ಇರಲಿ

FotoJet
Published on

 ಶ್ರೀ ಮಂಗಳನಾಥ ಸ್ವಾಮೀಜಿ ಕಿವಿಮಾತು | ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ

ಶಿಡ್ಲಘಟ್ಟ: ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಮಕ್ಕಳು ದಾರಿ ತಪ್ಪದೇ ಸನ್ಮಾರ್ಗದಲ್ಲಿ ನಡೆದು, ವಿದ್ಯೆ ಜತೆಗೆ ಕೀರ್ತಿ ಪಡೆಯಲಿ ಎನ್ನುವುದಾಗಿದೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಶ್ರೀ ಕೆಂಪಣ್ಣಸ್ವಾಮಿ, ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ 11ನೇ ವರ್ಷದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಬರಿ ವಿದ್ಯೆ ಇದ್ದರೆ ಸಾಲದು. ಮಾನವೀಯ ಮೌಲ್ಯ, ಸನ್ನಡತೆ, ಸಂಸ್ಕಾರ, ವಿವೇಕವನ್ನೂ ಮಕ್ಕಳು ಹೊಂದಿರಬೇಕು. ಆತ್ಮವಿದ್ಯೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಹೊರಗಿನ ವಿದ್ಯೆಯಿಂದ ಸಂಸ್ಕಾರ ಬೆಳೆಯುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪಠ್ಯೇತರ ಓದುವಿಕೆಯು ಆಲೋಚನಾ ಪರಿಧಿಯನ್ನು ವಿಕಸನಗೊಳಿಸುತ್ತದೆ. ಇತರರಿಗೆ ಮಾದರಿಯಾಗುವಂತೆ ಸಾಧಕರಾಗಿ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪೊಲೀಸ್ ಎಸ್.ಪಿ.ಕುಶಾಲ್ ಚೌಕ್ಸೆ ಮಾತನಾಡಿ, ಮಕ್ಕಳು ಒಳ್ಳೆಯ ಉದ್ದೇಶಕ್ಕೆ ಮೊಬೈಲ್ ಬಳಸಬೇಕು. ತಂತ್ರಜ್ಞಾನ ಜ್ಞಾನ ನೀಡುತ್ತಿದೆ. ಹಿರಿಯರನ್ನು ಗೌರವಿಸುವ ಸಮಾಜ ಉನ್ನತಿಯಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳಷ್ಟೇ ಮುಖ್ಯವಲ್ಲ, ಬದುಕಿನ ತಿಳಿವಳಿಕೆ ಬಹಳ ಮುಖ್ಯ. ಹೆಣ್ಣು ಮಕ್ಕಳ ಆಗಾಧವಾದ ಸಾಧನೆ ನಮ್ಮ ಕಣ್ಣಮುಂದಿದೆ. ಸಾಧಕರ ಪರಿಶ್ರಮ, ಚಿಂತನೆ, ಸಮಾಜಮುಖಿ ನಡೆವಳಿಕೆ ಮಾರ್ಗದರ್ಶನವಾಗಲಿ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಮತ್ತು ಉನ್ನತ ಶಿಕ್ಷಣದಲ್ಲಿ ಶೇ. 85 ಕ್ಕಿಂತಲೂ ಹೆಚ್ಚು ಅಂಕ ಪಡೆದ ಶ್ರೀ ಕೆಂಪಣ್ಣಸ್ವಾಮಿ, ಶ್ರೀ ವೀರಣ್ಣಸ್ವಾಮಿ ದೇವಾಲಯದ ಒಕ್ಕಲಿನ ಸಮುದಾಯದ 82 ಮಕ್ಕಳನ್ನು ಪಾಲಕರೊಂದಿಗೆ ಪುರಸ್ಕರಿಸಲಾಯಿತು.

ಶ್ರೀ ಕೆಂಪಣ್ಣಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ಎನ್.ನಾಗರಾಜ್, ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಕಾರ್ಯದರ್ಶಿ ಅಶ್ವತ್ಥಯ್ಯ, ಖಜಾಂಚಿ ಮುನಿಶಾಮಿಗೌಡ, ಟ್ರಸ್ಟಿನ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net