

ಚನ್ನಪಟ್ಟಣ : ನಾಟಕಗಳು ಮನುಷ್ಯನ ಬದುಕಿನ ಕನ್ನಡಿ ಇದ್ದಂತೆ, ನಾಟಕದ ತಿರುಳನ್ನು ಪ್ರತಿಯೊಬ್ಬರೂ ಅರಿಯಬೇಕು. ಪಾತ್ರಗಳಲ್ಲಿನ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎ.ಕರುಣ್ ತಿಳಿಸಿದರು.
ನಗರದ ಡಾ. ರಾಜ್ ಕುಮಾರ್ ಬಯಲು ರಂಗಮಂದಿರದಲ್ಲಿ ತಾಲೂಕಿನ ಕುಂತೂರುದೊಡ್ಡಿಯ ಶಾರದಾಂಬೆ ಜಾನಪದ ಕಲಾ ಟ್ರಸ್ಟ್ ಗುರುವಾರ ಆಯೋಜಿಸಿದ್ದ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ನಾಟಕವೆಂದರೆ ಸಾಹಿತ್ಯ, ಸಂಭಾಷಣೆ, ಗೀತೆ, ಅಭಿನಯ, ಸಂಸ್ಕೃತಿಯನ್ನು ಎತ್ತಿ ತೋರಿಸುವ ಕಲೆ. ಹಲವು ಸಂಘ ಸಂಸ್ಥೆಗಳು ರಂಗಕಲೆ ಉಳಿವಿಗಾಗಿ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ರಂಗಭೂಮಿ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಹೆಚ್ಚು ಹೆಚ್ಚು ನಾಟಕ ಪ್ರದರ್ಶನಗಳು ನಡೆಯಬೇಕಿವೆ ಎಂದು ಅಭಿಪ್ರಾಯಪಟ್ಟರು.
ಗ್ರೇಡ್-1 ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಮಾತನಾಡಿ, ರಂಗಭೂಮಿಯಲ್ಲಿ ನಿಜವಾದ ಮತ್ತು ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ. ಆಧುನಿಕತೆಯ ಭರಾಟೆಯಲ್ಲಿ ರಂಗಭೂಮಿ ಮೂಲೆ ಗುಂಪಾಗುತ್ತಿದೆ. ರಂಗಭೂಮಿ ಜೀವಂತವಾಗಿಡಲು ಕಲಾವಿದರ ಶ್ರಮ ಅಗತ್ಯ. ಅಂತಹ ಕಲಾವಿದರಿಗೆ ಮಠ ಮಾನ್ಯಗಳು, ಸರ್ಕಾರ, ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು. ಕಲಾವಿದರನ್ನು ಪೋಷಿಸುವ ಮೂಲಕ ರಂಗಭೂಮಿಯನ್ನು ಜೀವಾಂತವಾಗಿಡಲು ಎಲ್ಲರೂ ಶ್ರಮಿಸಬೇಕು ಎಂದು ಕರೆನೀಡಿದರು.
ರಂಗಭೂಮಿ ಪ್ರೋತ್ಸಾಹಕರಾದ ಮತ್ತೀಕೆರೆ ಚಂದ್ರಮೋಹನ್, ತಿಟ್ಟಮಾರನಹಳ್ಳಿ ಕೃಷ್ಣಪ್ಪ, ಡೇರಿ ನಾಗರಾಜು ಸೇರಿ ಹಲವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಕುಂತೂರುದೊಡ್ಡಿ ಪುಟ್ಟರಾಜು, ನಾಟಕ ನಿರ್ದೇಶಕ ಎಂ.ಕೆ. ಧರ್ಮೇಂದ್ರ ಕುಮಾರ್, ಕೆಂಗಲ್ ಆಂಜನೇಯಸ್ವಾಮಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಚಕ್ಕೆರೆ ವಿಜೇಂದ್ರ, ಭಾವಿಪ ತಾಲೂಕು ಅಧ್ಯಕ್ಷ ಪಿ.ಗುರುಮಾದಯ್ಯ, ದಶವಾರ ಗ್ರಾಪಂ ಉಪಾಧ್ಯಕ್ಷೆ ನಳಿನಿ, ಮುಖಂಡರಾದ ಟಿ.ಕೆ.ಮುರುಳಿ, ವೆಂಕಟೇಶ್, ಟಿ.ಕೆ.ರಾಜು ಹಲವರು ಇದ್ದರು.
ಪ್ರೇಕ್ಷಕರ ಮನಸೂರೆಗೊಳ್ಳುತ್ತಿರುವ ನಾಟಕೋತ್ಸವ!!
ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿರುವ ಡಾ. ರಾಜ್ ಬಯಲು ರಂಗಮಂದಿರದಲ್ಲಿ ಜ.19 ರಿಂದ ಆರಂಭಗೊಂಡಿರುವ ನಾಟಕೋತ್ಸವ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಶ್ರೀ ಕೆಂಗಲ್ ಆಂಜನೇಯಸ್ವಾಮಿ ಸಾಂಸ್ಕೃತಿಕ ಕಲಾಟ್ರಸ್ಟ್ 76ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಜ್ಯಮಟ್ಟದ ನಾಟಕೋತ್ಸವ ಆಯೋಜಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ನೀಡಿದೆ. ಪ್ರತಿನಿತ್ಯ ವಿವಿಧ ಕಲಾತಂಡ ಪೌರಾಣಿಕ ನಾಟಕಗಳನ್ನು ಪ್ರದರ್ಶನಗೊಳ್ಳುತ್ತಿವೆ. ನಾಟಕೋತ್ಸವ ರಂಗಪ್ರೀಯರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿವೆ.