ಯುವಕರು ವೀರಶೈವ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ

web 1
Published on

ಮರಳೇಗವಿ ಮಠದ ಮುಮ್ಮಡಿ ಶ್ರೀಶಿವರುದ್ರ ಸ್ವಾಮೀಜಿ ಕರೆ

ಕನಕಪುರ : ಬಸವಣ್ಣನವರು ವೀರಶೈವ ಚಳವಳಿಯ ನಾಯಕರಾಗಿದ್ದರು. ವರ್ಣಾಶ್ರಮದ ವಿರುದ್ಧ ತಿರುಗಿಬಿದ್ದು, ಅವರ ನೇತೃತ್ವದಲ್ಲಿಯೇ ಧರ್ಮದ ಪ್ರತಿಯೊಂದು ಅಂಶವನ್ನೂ ಯೋಚಿಸಿ ಕಾರ್ಯಗತಗೊಳಿಸಲಾಗಿದೆ. ಶಿವಾನುಭವ ಮಂಟಪದ ಮೂಲಕ ಸಮಾಜದ ಮಾರ್ಗಸೂಚಿಗಳನ್ನು ನೀಡಿದ ಇಂತಹ ಧರ್ಮದಲ್ಲಿ ಜನಿಸಿದ ನಾವೇ ಪುಣ್ಯವಂತರು ಎಂದು ಶ್ರೀಕ್ಷೇತ್ರ ಮರಳೇಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.
ನಗರದ ದೇಗುಲಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಿದಾಗ ಸಂಘಟನೆಗೆ ಶಕ್ತಿ ಮತ್ತು ಬಲವಿರುತ್ತದೆ. ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಕೊಂಡು ಕೆಲಸ ಮಾಡಿದಾಗ ಸಮಾಜದ ಸರ್ವರಲ್ಲೂ ಸದಾಶಯವನ್ನು ಕಾಣಬಹುದು. ಆಗ ಬಸವಣ್ಣನವರು ಕಂಡ ಕನಸಿಗೆ ಪೂರಕವಾಗಿ ನಡೆದುಕೊಂಡಂತಾಗುತ್ತದೆ. ವಿಶ್ವದ ಯಾವುದೇ ಭಾಗದಲ್ಲಿ ಧರ್ಮ, ಮತ, ಪಂಥದಲ್ಲಿ ಇಂತಹ ವಿಶಿಷ್ಟ ಸಂಸ್ಕಾರ ಇರಲಾರದು. ಇಂತಹ ವಿಶ್ವಧರ್ಮವನ್ನು ಗಟ್ಟಿಯಾಗಿ ಬೆಳೆಸಬೇಕು. ತಮ್ಮ ಮಕ್ಕಳಿಗೆ ವಿದ್ಯೆಹಾಗೂ ಸಂಸ್ಕಾರವನ್ನು ನೀಡಿದಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ ಎಂದರು.
ಪ್ರಾಣಿ-ಪಕ್ಷಿಗಳು ಒಟ್ಟಿಗೆ ಜೀವಿಸುವ ಸನ್ನಿವೇಶವನ್ನು ನಾವು ಕಾಣುತ್ತೇವೆ. ಆದರೆ ಒಂದು ಧರ್ಮ ಮತ್ತು ಸಮಾಜದ ಜನರು ಅದಕ್ಕಿಂತ ಕಡಿಮೆಯಾಗಬಾರದು. ಎಲ್ಲರೂ ಒಗ್ಗಟ್ಟಿನಿಂದ ಸಮಾಜ ಕಟ್ಟುವ ಕೆಲಸ ಮಾಡಬೇಕು. ಯುವಕರು ಸಮಾಜದ ಸಂಘಟನೆಯಲ್ಲಿ ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ದೇಗುಲಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ತಾಲೂಕಿನಲ್ಲಿ ಸಮಾಜದ ಚುನಾವಣೆ ಬಂದಾಗ ಎಲ್ಲರೂ ಸೌಹಾರ್ದತೆಯಿಂದ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಲು ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಜವಾಬ್ದಾರಿ ಸಿಕ್ಕದೆ. ಅದನ್ನು ಸಮಾಜದ ಒಳಿತಿಗಾಗಿ ಕ್ರಿಯಾಶೀಲ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಮಹದೇವ ಬಿದರಿ ಮಾತನಾಡಿ, ಸ್ವಾಮೀಜಿಗಳು ಪೂಜೆ-ಪುನಸ್ಕಾರ, ಶುಭ ಸಮಾರಂಭಗಳಲ್ಲಿ ತಾವು ಸಮಾಜಕ್ಕೆ ಹೇಳುವ ವೇದಮಂತ್ರಗಳನ್ನು ಕನ್ನಡದಲ್ಲಿಯೇ ಪಠನೆ ಮಾಡುವಂತಾಗಬೇಕು. ಆಗ ಕನ್ನಡ ಭಾಷೆಗೂ ಮತ್ತಷ್ಟು ಆತ್ಮೀಯತೆ ಬೆಳೆಯುತ್ತದೆ. ನಾವು ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎನ್ನುವುದು ಮುಖ್ಯವಾಗಿದೆ. ನಾವು ಕಾಯಕ ಮಾಡುವುದರ ಜತೆಗೆ ಸ್ವಾವಲಂಬಿಗಳಾಗಬೇಕು. ಶರಣರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ರಾಜಕೀಯ, ಶೈಕ್ಷಣಿಕ ಹಾಹೂ ಧಾರ್ಮಿಕ ಶಕ್ತಿಗಳು ಬರುವಂತೆ ಅವರನ್ನು ವಿದ್ಯಾವಂತರನ್ನಾಗಿಸಬೇಕು ಎಂದರು.
ತಾಲೂಕು ಘಟಕದ ನೂತನ ಅಧ್ಯಕ್ಷ ಮರಳವಾಡಿ ಉಮಾಶಂಕರ್ ಮಾತನಾಡಿ, ಶ್ರೀಗಳ ಹಾಗೂ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಸಂಘವನ್ನು ಮುನ್ನಡೆಸಿಕೊಂಡು ಮುಂದೆ ತಾವು ಕೈಗೊಳ್ಳುವ ಸಂಘದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ದೇಗುಲಮಠದ ಪೀಠಾಧ್ಯಕ್ಷ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಜ್ಜಬಸವನಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಲ್ವಪತ್ರ ಮಠದ ಶ್ರೀ ಶಿವಲಿಂಗ ಸ್ವಾಮೀಜಿ, ತೋಟಹಳ್ಳಿ ಶ್ರೀ ಬಸವಪ್ರಭು ಸ್ವಾಮೀಜಿ, ಕೋಡಿಹಳ್ಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಾತನೂರು ನಿಜಗುಣ ಸ್ವಾಮೀಜಿ, ಹೊರಳಗಲ್ಲು ಹಿಮ್ಮಡಿ ಸಿದ್ಧಲಿಂಗ ಸ್ವಾಮೀಜಿ, ಸಂಘದ ನಿಕಟಪೂರ್ವ ಅಧ್ಯಕ್ಷ ಸಾಂಬಶಿವ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಆನೇಕಲ್ ವೀರಶೈವ ಸಮಾಜದ ಅಧ್ಯಕ್ಷ ಇನ್ನಕ್ಕಿ ಜಯಣ್ಣ, ಚನ್ನಪಟ್ಟಣ ಅಧ್ಯಕ್ಷ ಶಿವಮಾದಯ್ಯ ಸೇರಿ ಅನೇಕ ಸ್ವಾಮೀಜಿಗಳು, ಮುಖಂಡರು ಇದ್ದರು.

ಸಮುದಾಯ ಅಭಿವೃದ್ಧಿಗೆ ಬಲ ತುಂಬಲಿ
ವೀರಶೈವ ಹಾಗೂ ಲಿಂಗಾಯತ ಸಮಾಜಗಳು ಬೇರೆಯಲ್ಲ. ಅವೆರೆಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ವೀರಶೈವ ಸಮಾಜದ ಅಭಿವೃದ್ಧಿಗೆ ಸಮಾಜದ ಬಾಂಧವರು ತಮ್ಮ ಆದಾಯದಲ್ಲಿ ಶೇ. 1 ನೆರವು ನೀಡುವ ಅಗತ್ಯವಿದೆ. ತಮ್ಮ ಮಕ್ಕಳನ್ನು ಕನಿಷ್ಠಪಕ್ಷ ಪಿಯುಸಿ ವರೆಗಾದರೂ ಕಡ್ಡಾಯವಾಗಿ ಓದಿಸಲೇಬೇಕು. ಅದಕ್ಕೆ ಅಡ್ಡಿ ಉಂಟಾಗುವ ಬಡವರಿಗೆ ಸಮಾಸಭಾ ನೆರವಿಗೆ ನಿಲ್ಲುತ್ತದೆ. ತಮಿಳುನಾಡಿನ ಹೊಗೆನಿಕಲ್‌ನಿಂದ ಬೀದರ್ ಜಿಲ್ಲೆಯವರೆಗೂ ಸಂಘಟನೆ ಆಶಾದಾಯಕವಾಗಿ ಮೂಡಿಬರಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಸಮುದಾಯದ ಅಭಿವೃದ್ಧಿಗೆ ಬಲ ತುಂಬಬೇಕಿದೆ. ಲಿಂಗಾಯತ ಸಮಾಜ ಸರ್ವರಲ್ಲೂ ಸದಾಶಯವನ್ನು ಬಯಸುತ್ತದೆ. ಬಸವಣ್ಣನವರು ಕಂಡ ಕನಸು ನನಸಾಗಬೇಕು. ಇಂದಿನ ಸಮಾರಂಭ ಎಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಮಹದೇವ ಬಿದರಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net