ಯುವಪೀಳಿಗೆ ನೈತಿಕ ಮೌಲ್ಯ ಬೆಳೆಸಿಕೊಳ್ಳಲಿ

FotoJet (1)
Published on

ಶಾಸಕ ರವಿಕುಮಾರ್ ಸಲಹೆ | ಯಣ್ಣಂಗೂರು ಗ್ರಾಮದಲ್ಲಿ ದೇವಾಲಯ ಕುಂಭಾಭಿಷೇಕ

ಶಿಡ್ಲಘಟ್ಟ : ಪುರಾತನವಾದ ಪರಂಪರೆ, ಇತಿಹಾಸವಿರುವ ಭಾರತೀಯರ ಧಾರ್ಮಿಕ ಸಂಸ್ಕೃತಿಯನ್ನು ಉಳಿಸಿ ಯುವಪೀಳಿಗೆಯಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಕಾರ್ಯವಾಗಬೇಕಿದೆ. ನಿರಂತರ ಧಾರ್ಮಿಕ ಕಾರ್ಯಗಳ ಮೂಲಕ ಮಾನಸಿಕ ನೆಮ್ಮದಿ, ಶಾಂತಿ ಪಡೆಯಬಹುದಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಸೋಮೇಶ್ವರಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ, ಶ್ರೀ ಯೋಗಿ ನಾರೇಯಣ ಯತೀಂದ್ರರ ದೇವಾಲಯಗಳ ಮಹಾದ್ವಾರದ ಕಳಸಗಳ ಕುಂಭಾಭಿಷೇಕ, ಆರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಪೀಳಿಗೆಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ, ಭಾಗವತ ಬೋಧನೆಯ ಮೂಲಕ ದೇಶದ ಸಂಸ್ಕೃತಿಯನ್ನು ಪರಿಚಯಿಸಬೇಕು. ಪುರಾಣಗಳಲ್ಲಿನ ಪ್ರತಿ ಪಾತ್ರಗಳು ಮಗುವಿನ ಮನಸ್ಸಿನಲ್ಲಿ ಮೌಲ್ಯಗಳನ್ನು ಸೃಜಿಸುತ್ತವೆ. ಮೌಲ್ಯಯುತ ಸಭ್ಯ ಸಮಾಜದ ದೃಷ್ಟಿಯ ಉದ್ದೇಶದಿಂದ, ಬಾಲ್ಯದಿಂದಲೇ ಸಾಮಾಜಿಕ, ನೈತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಿತ್ತಬೇಕು ಎಂದರು.

ಮೌಲ್ಯಗಳು ಮರುಸ್ಥಾಪನೆಯಾಗಬೇಕು

ತಾಲೂಕು ಬಿಜೆಪಿ ಅಧ್ಯಕ್ಷ ಸೀಕಲ್ ಆನಂದಗೌಡ ಮಾತನಾಡಿ, ಯುವಪೀಳಿಗೆ ಮೇಲೆ ಹಿರಿಯರ ವರ್ತನೆಗಳು ಪ್ರಭಾವ ಬೀರಿ, ಕ್ಷೀಣಿಸುತ್ತಿರುವ ಸಂಸ್ಕಾರ, ಗುರು ಹಿರಿಯರಲ್ಲಿನ ಗೌರವಾದರ ಭಾವನೆಗಳು ಮರುಸೃಷ್ಟಿಯಾಗಬೇಕಿದೆ. ಜೀವನದಲ್ಲಿ ಸರಳತೆ ಅನಿವಾರ್ಯವಾಗಿದ್ದು, ಆಡಂಬರ, ಆಧುನೀಕತೆಯ ಪ್ರಭಾವದಿಂದ ಕುಸಿಯುತ್ತಿರುವ ಮೌಲ್ಯಗಳು ಮರುಸ್ಥಾಪನೆಯಾಗಬೇಕು ಎಂದರು

ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಯಣ್ಣಂಗೂರು ಗ್ರಾಮಕ್ಕೆ ಇತಿಹಾಸವಿದ್ದು ಕೈವಾರ ಯೋಗಿನಾರೇಯಣ ಯತೀಂದ್ರರು ಇಲ್ಲಿ ಸಂಚರಿಸಿದ್ದಾರೆ. ಗ್ರಾಮದ ದ್ವಾರಬಾಗಿಲು ಜಯ, ವಿಜಯ, ಆನೆಗಳನ್ನು ಹೊಂದಿದ್ದು, ಮೇಲ್ಬಾಗದಲ್ಲಿ ಶ್ರೀ ಸೋಮೇಶ್ವರಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ ಮತ್ತು ಕೈವಾರ ಯೋಗಿನಾರೇಯಣ ಗುರುಗಳ ವಿಗ್ರಹಗಳು ಆಕರ್ಷಕವಾಗಿವೆ. ಕುಂಭಾಭಿಷೇಕ ಕಾರ್ಯಗಳು ಲೋಕಹಿತಾರ್ಥವಾಗಿ ನಡೆದಿರುವುದು ಸಂತಸ ತಂದಿದೆ ಎಂದರು.

ನೂತನ ಹೆಬ್ಬಾಗಿಲು ಬಳಿ ವಿ.ಎನ್.ರಾಮಮೋಹನ್‌ಶಾಸ್ತ್ರಿ ಮತ್ತು ತಂಡದವರಿಂದ ಕಳಸ ಸ್ಥಾಪನೆ, ಹೋಮಾದಿ ಕಾರ್ಯಗಳು, ಕುಂಭಾಭಿಷೇಕ, ಪ್ರತಿಷ್ಠಾಪನಾ ಕಾರ್ಯಕ್ರಮಗಳು ಜರುಗಿದವು. ಶಾಸಕ ಬಿ.ಎನ್.ರವಿಕುಮಾರ್ ಅವರು ನಾಮಫಲಕಗಳನ್ನು ಅನಾವರಣಗೊಳಿಸಿ ದ್ವಾರ ಬಾಗಿಲನ್ನು ಲೋಕಾರ್ಪಣೆ ಮಾಡಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್‌ಮುನಿಯಪ್ಪ, ನಿರ್ದೇಶಕ ಕೆ.ಮಂಜುನಾಥ್, ಮಾಜಿ ನಿರ್ದೇಶಕ ಸಿ.ವಿ.ನಾರಾಯಣಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ, ಜೆಡಿಎಸ್ ಮುಖಂಡ ತಾದೂರು ರಘು, ಕೃಷಿಕ ಸಮಾಜದ ನಿರ್ದೇಶಕ ನಾಗಮಂಗಲ ಶ್ರೀನಿವಾಸಗೌಡ, ಹೊಸಪೇಟೆ ಗ್ರಾಪಂ ಅಧ್ಕಷೆ ದ್ಯಾವಮ್ಮ ಕೆಂಪಣ್ಣ, ಉಪಾಧ್ಯಕ್ಷೆ ಶ್ವೇತಾ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net