

ಮಳವಳ್ಳಿ: ಪ್ರತಿ ಹಳ್ಳಿಯಲ್ಲೂ ಜನರು ಮದ್ಯ ವ್ಯಸನ ತ್ಯಜಿಸುವುದರ ಜತೆಗೆ ಗ್ರಾಮಗಳಲ್ಲಿ ಮದ್ಯ ನಿಷೇಧ ಮಾಡುವಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಾಗ ಮಾತ್ರ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕಿರಗಸೂರು ಗ್ರಾಮದಲ್ಲಿ ಮಂಗಳವಾರ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ದುಶ್ಚಟಗಳಿಗೆ ದಾಸರಾದರೆ ಸಂವಿಧಾನದ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಾದಕ ವ್ಯಸನಗಳನ್ನು ತ್ಯಜಿಸುವಂತಹ ದಿಟ್ಟ ನಿರ್ಧಾರವನ್ನು ಯುವ ಸಮೂಹ ಮಾಡಬೇಕಿದೆ. ಆಗ ಮಾತ್ರ ಗ್ರಾಮಗಳಲ್ಲಿ ಅಂಬೇಡ್ಕರ್ ತತ್ವ ಮತ್ತು ಸ್ವಾಭಿಮಾನದ ಆದರ್ಶಗಳಿಗೆ ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳುವ ಮೂಲಕ ಬಾಬಾ ಸಾಹೇಬರ ಆಶಯದಂತೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಕರೆ ನೀಡಿದರು.
ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್ ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದರು.
ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮೀ, ಚಿತ್ರನಟ ಚೇತನ್ ಅಹಿಂಸಾ, ದರ್ಶನ್, ಬಿ ಸೋಮಶೇಖರ್, ನಿವೃತ್ತ ಯೋಧ ಸಿದ್ದರಾಜು, ಮುಖಂಡರಾದ ರಘುರಾಜ್, ವಿಷಕಂಠ, ಸಾವುಕಯ್ಯ, ಮರಿಮಾದಯ್ಯ, ದೇವರಾಜು, ಮಹಾದೇವಯ್ಯ, ಸಂದೇಶ್ ಮತ್ತಿತರರು ಹಾಜರಿದ್ದರು.