

ಬೈಲಕುಪ್ಪೆ: ಕಾಮಗಾರಿಯ ಗುಣಮಟ್ಟ ಹಾಗೂ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಗ್ರಾಮಸ್ಥರು ಪರಿಶೀಲಿಸಿದಾಗ ಅಭಿವೃದ್ಧಿ ಕಾರ್ಯಗಳು ಸರಿಯಾದ ರೀತಿಯಲ್ಲಿ ಆಗಲು ಸಾಧ್ಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಲೋಕೇಶ್ ಹೇಳಿದರು.
ಸಮೀಪದ ಹುಣಸವಾಡಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಮಾಬಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಯೇ ಗ್ರಾಮ ಪಂಚಾಯಿತಿಯ ಧ್ಯೇಯವಾಗಿದ್ದು, ಅಭಿವೃದ್ಧಿ ಕಾರ್ಯಗಳ ಅಂಕಿ ಅಂಶಗಳನ್ನು ಪ್ರತಿ ವರ್ಷ ಜಮಾಬಂದಿಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲಿಸಲಾಗುವುದು. ಇದರಿಂದಾಗಿ ಗ್ರಾಮಸ್ಥರು ಕಾಮಗಾರಿಗಳ ಬಗ್ಗೆ ಮತ್ತು ಅವುಗಳಿಗೆ ತಗಲುವ ವೆಚ್ಚಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಆರ್.ಮಂಜುನಾಥ್ ಮಾತನಾಡಿ, ಪಂಚಾಯಿತಿ ವಿವಿಧ ಬ್ಯಾಂಕುಗಳಲ್ಲಿ ತನ್ನ ಆರ್ಥಿಕ ವಹಿವಾಟು ನಡೆಸುತ್ತಿದ್ದು, 15ನೇ ಹಣಕಾಸು, ವರ್ಗ-1, ವಿದ್ಯುತ್ ಬಿಲ್ಲು, ಸಿಬ್ಬಂದಿ ವೇತನ, ಸದಸ್ಯರ ಗೌರವ ಧನ ಸೇರಿದಂತೆ ಇತರೆ ಅನುದಾನಗಳನ್ನು ಬಳಕೆ ಮಾಡಲಾಗಿದೆ ಎಂದು ವಿವರಿಸಿದರು.
ನೋಡಲ್ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಧನ್ಯರತಿ ಕಾರ್ಯನಿರ್ವಹಿಸಿದರು. ಗ್ರಾ.ಪಂ. ಸದಸ್ಯರಾದ ರೇಣುಕಾ, ಗೌರಮ್ಮ, ಜ್ಯೋತಿ, ಶಶಿಕಲಾ, ಗ್ರಂಥಪಾಲಕಿ ಗೀತಾ, ಗ್ರಾಮಸ್ಥರಾದ ಪುಟ್ಟಣ್ಣ, ಅನಿಲ್, ಕರಿಗೌಡ, ರಾಮಣ್ಣ, ರಘು, ಸೋಮಣ್ಣ, ಲೋಕೇಶ್, ಮಲ್ಲಿಯಪ್ಪ, ಸ್ವಾಮಿ ಇದ್ದರು.