ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿಯಲಿ

ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿಯಲಿ
Published on

ಕುಶಾಲನಗರ: ವಿದ್ಯಾರ್ಥಿಗಳು ಕಾಲೇಜು ವಿದ್ಯಾಭ್ಯಾಸ ಸಂದರ್ಭದಲ್ಲಿ ಮಾದಕ ವಸ್ತುಗಳಿಂದ ದೂರವಿದ್ದಲ್ಲಿ, ಭವಿಷ್ಯದ ದಿನಗಳಲ್ಲೂ ದುಶ್ಚಟಗಳಿಂದ ದೂರ ಉಳಿಯಬಹುದು ಎಂದು ಎನ್‌ಎಸ್‌ಯುಐ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.

ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ಅನುಗ್ರಹ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಎನ್‌ಎಸ್‌ಯುಐ ಹಾಗೂ ಕುಶಾಲನಗರದ ಪೊಲೀಸ್ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಅನವಶ್ಯಕ ವಾಹನಗಳನ್ನು ವೇಗವಾಗಿ ಓಡಿಸುವುದನ್ನು ಅಭ್ಯಾಸ ಮಾಡಿಕೊಳ್ಳಬಾರದು. ನಮ್ಮ ಚಾಲನೆಯಿಂದ ಇನ್ನೊಬ್ಬರಿಗೆ ತೊಂದರೆ ಆಗದಂತೆ ಜಾಗ್ರತೆ ವಹಿಸಬೇಕು ಎಂದು ಕರೆನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಶಾಲನಗರ ತಾಲೂಕು ಘೋಷಣೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ನಮ್ಮ ವಿದ್ಯಾಭ್ಯಾಸಕ್ಕಾಗಿ ಪಾಲಕರು ಹಲವು ತ್ಯಾಗಗಳನ್ನು ಮಾಡಿರುತ್ತಾರೆ. ಇದನ್ನು ಅರಿತು ಕಲಿಕೆಗೆ ಒತ್ತು ನೀಡಬೇಕು. ಉತ್ತಮರ ಸ್ನೇಹ ಮಾಡುವುದರಿಂದ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಸ್ವಯಂಶಿಸ್ತು ಅಳವಡಿಸಿಕೊಳ್ಳುವ ಮೂಲಕ ಕಾನೂನು ಪಾಲನೆ ಮಾಡಬೇಕು ಎಂದರು.

ಕುಶಾಲನಗರ ಸಂಚಾರ ಠಾಣಾಧಿಕಾರಿ ಗಣೇಶ್ ಸಂಚಾರ ನಿಯಮಗಳ ಬಗ್ಗೆ ವಿವರಿಸಿದರು. ಪುರಸಭಾ ಸದಸ್ಯ ನವೀನ್ ಗೌಡ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಸತೀಶ್ ಕಾಳೇಗೌಡ, ಅನುಗ್ರಹ ಪಿಯು ಮತ್ತು ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಿಂಗಮೂರ್ತಿ, ಎನ್‌ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ ರೂನಾಯಿಜ್ ಅರ್ಜುನ್, ಜಿಲ್ಲಾ ಸಮಿತಿಯ ಸದಸ್ಯ ಶರಣ್, ತಫೀಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net