

ಬೆಟ್ಟದಪುರ: ಶಿಸ್ತು ಜೀವನ, ನಿಯಮ ಪಾಲನೆ, ಕ್ರೀಡಾ ಮನೋಭಾವನೆಯಿಂದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗಿಯಾಗುವ ಮೂಲಕ ಅವಕಾಶ ಬಳಕೆ ಮಾಡಿಕೊಳ್ಳಬೇಕು ಎಂದು ಕನ್ನಡ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.
ಬೆಟ್ಟದಪುರದ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ಶುಕ್ರವಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಟ್ಟದಪುರದವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಇಷ್ಟದ ಕ್ರೀಡೆಯಲ್ಲಿ ನಿರಂತರ ಪರಿಶ್ರಮವಹಿಸಿ ತರಬೇತಿ ಪಡೆದುಕೊಂಡಲ್ಲಿ ಮಾತ್ರ ಜಿಲ್ಲಾ, ರಾಜ್ಯ ಮಟ್ಟಗಳಿಗೆ ಆಯ್ಕೆಯಾಗಿ ತಾಲೂಕಿನ ಕೀರ್ತಿ ಹೆಚ್ಚಿಸಲು ಸಾಧ್ಯವಿದೆ ಎಂದರು.
ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಿ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದಲ್ಲದೆ, ಗ್ರಾಮೀಣ ಭಾಗದ ಒಳ್ಳೆಯ ಕ್ರೀಡಾಪಟುಗಳನ್ನು ಗುರುತಿಸಲು ಇಂತಹ ಆಟೋಟ ಸ್ಪರ್ಧೆಗಳು ಸಹಾಯಕವಾಗಲಿದೆ. ಇದಲ್ಲದೆ ತಾಲೂಕಿನ ವಿವಿಧೆಡೆ ಕಾಲೇಜುಗಳಿಂದ ಕ್ರೀಡಾಪಟುಗಳು ಆಗಮಿಸಿ ಎಲ್ಲರ ಪರಸ್ಪರ ಪರಿಚಯವಾಗಿ, ಉತ್ತಮ ಬಾಂಧವ್ಯ ಬೆಳೆಸಲು ಅನುಕೂಲವಾಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದು, ಮುಖ್ಯವಾಗಿರುತ್ತದೆ ಹೊರತು ಗೆಲುವು-ಸೋಲು ಮುಖ್ಯವಾಗಿರುವುದಿಲ್ಲ ನಿಮ್ಮ ಭಾಗವಹಿಸುವಿಕೆ ನಿಮ್ಮಲ್ಲಿನ ಆಸಕ್ತಿ, ನೀವು ತಂಡಕ್ಕೆ ಕೊಡುವ ಕೊಡುಗೆ ನಿಜವಾದ ಕ್ರೀಡಾಸ್ಪೂರ್ತಿ ಬೆಳೆಸಲು ಸಹಾಯಮಾಡುತ್ತದೆ ಎಂದರು.
ಭಾಗವಹಿಸಿದ ಎಂಟು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ವಿವಿಧ ಕಾಲೇಜುಗಳಿಂದ ಆಗಮಿಸಿದ ಕ್ರೀಡಾಪಟುಗಳು ಪಥಸಂಚಲನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಪ್ರೀತಿ ಅರಸ್, ಸಿಡಿಸಿ ಉಪಾಧ್ಯಕ್ಷ ಕುಂಚಪ್ಪ ಕಾರ್ನಾಡ್, ಪಿಡಿಒ ಮಂಜುನಾಥ್, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್ ಕುಮಾರ್, ಸಬ್‌ಇನ್ಸ್‌ಪೆಕ್ಟರ್ ಶಿವಶಂಕರ್, ಕಾಲೇಜು ಪ್ರಾಂಶುಪಾಲ ಜ್ಯೋತಿ ಪ್ರಸಾದ್, ಮುಖಂಡರಾದ ಜವರೇಗೌಡ, ದಿನೇಶ್, ಸೋಮಶೇಖರ್, ಶಿವಕುಮಾರ್ ಸ್ವಾಮಿ, ಗಿರಿಗೌಡ, ಅನಿತಾತೋಂಟಪ್ಪಶೆಟ್ಟಿ, ಕುಮಾರಸ್ವಾಮಿ, ವೆಂಕಟೇಶ್, ರವಿ, ಮನು, ರಕ್ಷಿತ್, ದಿಲೀಪ್ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.