

ಸಿದ್ದಾಪುರ: ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಸಾಧನೆಯತ್ತ ಸಾಗಬೇಕು ಎಂದು ಸಿದ್ದಾಪುರ ಸಂತ ಜೋಸೆಫರ ಚರ್ಚ್‌ನ ಧರ್ಮಗುರು ಮೈಕಲ್ ಹೇಳಿದರು.
ಕ್ರಿಕೆಟರ್ಸ್ ಸಿದ್ದಾಪುರ ವತಿಯಿಂದ ಭಾನುವಾರ ಸಂತ ಜೋಸೆಫರ ಚರ್ಚ್‌ನಲ್ಲಿ ಹಮ್ಮಿಕೊಂಡಿದ್ದ ಧರ್ಮ ಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಶ್ಲಾಘನೀಯವಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಹಾಗೂ ಕೊಡಗಿನಲ್ಲಿ ಪ್ರಥಮ ಸ್ಥಾನ ಪಡೆದ ನೆಲ್ಯಹುದಿಕೇರಿಯ ಜಾನ್ಸನ್ ಅವರ ಪುತ್ರಿ ಚರೀಷ್ಮಾ ಹಾಗೂ ಶೇ. 85ಕ್ಕೂ ಹೆಚ್ಚು ಅಂಕ ಪಡೆದ ಜೀವಿನ್, ಜೀವಿಟಾ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅನುಷಾ, ಶಿನೋಯ್, ದಿಯಾ ಜೋಸೆಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜೋಶ್ ಕುರಿಯನ್, ಮಾಜಿ ಜಿಪಂ ಸದಸ್ಯ ಜಾನ್ಸನ್, ವಿಜೇಶ್, ಡಾನ್, ಜಾರ್ಜ್ ಜೊಸೇಫ್, ರೀಗಲ್, ಜೋಸಿ, ಜಿಮ್ಮಿಮಾಸ್ಟರ್, ಸನ್ನಿಲ, ಅಂಥೋನಿ, ಜೋಯ್ ಇತರರು ಇದ್ದರು.