

ಸೋಮವಾರಪೇಟೆ: ಪ್ರೌಢಶಾಲಾ ಶಿಕ್ಷಣ ವಿದ್ಯಾರ್ಥಿಗಳ ಬದುಕಿನ ಭವಿಷ್ಯದ ತಳಪಾಯವಾಗಿದ್ದು, ಮನಸ್ಸನ್ನು ಕೇಂದ್ರೀಕರಿಸಿಕೊಂಡು, ಶಿಸ್ತನ್ನು ಮೈಗೂಡಿಸಿಕೊಂಡು ಕಲಿಯಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅಭಿಪ್ರಾಯಿಸಿದರು.
ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ತೋಳೂರುಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಸಾಧನೆ ಮಾಡುವ ಸಾಮರ್ಥ್ಯ ಪ್ರತಿ ವಿದ್ಯಾರ್ಥಿಯಲ್ಲೂ ಇರುತ್ತದೆ. ಸಾಧಿಸುವ ಗುರಿ, ದೃಢತೆ, ಆತ್ಮವಿಶ್ವಾಸ ಇದ್ದಾಗ ಮಾತ್ರ ಗುರಿಸಾಧಿಸಬಹುದು ಎಂದರು. ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ನಂತರ ಉತ್ತಮ ಬದುಕಿಗೆ ಬೇಕಾಗುವ ಬಹಳಷ್ಟು ಅವಕಾಶಗಳು ವಿದ್ಯಾರ್ಥಿಗಳಿಗೆ ತೆರೆಯಲ್ಪಡುತ್ತವೆ. ಅದರ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಮುಂದೆ ಗುರಿ, ಹಿಂದೆ ಗುರುಗಳ ಆಶೀರ್ವಾದದೊಂದಿಗೆ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ಹೇಳಿದರು.
ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಮಾತನಾಡಿ, ಬಲಿಷ್ಠ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪತ್ರಿಕಾ ಮಾಧ್ಯಮಗಳು ಮಹತ್ತರ ಪಾತ್ರ ವಹಿಸುತ್ತವೆ. ಕೊಡಗು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದನ್ನು ಕಳೆದ ಹತ್ತು ವರ್ಷಗಳಿಂದ ಗಮನಿಸಿದ್ದೇನೆ. ಇಲ್ಲಿನ ಪತ್ರಕರ್ತರು ಮೌಲ್ಯಧಾರಿತ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವುದನ್ನು ಗಮನಿಸಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಪತ್ರಕರ್ತ ಹಾಗೂ ಕಿರುಚಿತ್ರ ನಿರ್ದೇಶಕ ವಿಶ್ವಕುಂಬೂರು ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ್ ಹಾನಗಲ್, ಕಾರ್ಯದರ್ಶಿ ಮಾಲಂಬಿ ದಿನೇಶ್, ಖಜಾಂಚಿ ಬಿ.ಎ.ಭಾಸ್ಕರ್, ವಾರ್ಡನ್ ಶಬರಿಗಿರೀಶ್ ಇದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಲಾಶ್ಯ, ಶಭಾ, ಕಶ್ವಿ, ಮೌಲ್ಯ ಅವರಿಗೆ ಅತಿಥಿಗಳು ಬಹುಮಾನ ವಿತರಿಸಿದರು.