

ಪಿರಿಯಾಪಟ್ಟಣ: ಒಕ್ಕಲಿಗ ಸಮುದಾಯವು ಅವಕಾಶಗಳನ್ನು ಸೃಷ್ಟಿಸಿಕೊಂಡು ಸಮಾಜಕ್ಕೆ, ನಾಡಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುವತ್ತ ಹೆಚ್ಚಿನ ಗಮನಹರಿಸಬೇಕೆಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಸಂಸ್ಮರಣೋತ್ಸವ ಮತ್ತು ಪ್ರಗತಿಪರ ರೈತರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಧಾನ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಒಕ್ಕಲಿಗ ಸಮುದಾಯ ಸಮಾಜದಲ್ಲಿರುವ ಅವಕಾಶಗಳನ್ನು ಸೃಷ್ಟಿಸಿಕೊಂಡು ಪ್ರಗತಿಯತ್ತ ಮುನ್ನುಗಬೇಕು, ಕೃಷಿಯನ್ನೇ ಹೆಚ್ಚು ಅವಲಂಬಿಸಿಕೊಳ್ಳುವುದರ ಬದಲು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಪಂಚದ ಇನ್ನಿತರ ಕ್ಷೇತ್ರಗಳತ್ತ ತಮ್ಮ ಗಮನವನ್ನು ಹರಿಸಿ ಹೊಸ ಹೊಸ ಅಧ್ಯಯನಗಳಿಗೆ, ಹೂಡಿಕೆಗಳಿಗೆ ಆದ್ಯತೆ ನೀಡಬೇಕು ಇಂದು ನಮ್ಮ ಸಮುದಾಯದಲ್ಲಿ ಮಹಿಳೆಯರು ಕೂಡ ಜ್ಞಾನವಂತರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ನಂಜೇಗೌಡ ನಂಜುಂಡ ರವರು ಬಡತನದಲ್ಲಿ ಹುಟ್ಟಿ ಬೆಳೆದು ತನ್ನ ಊರಿಗೆ ಏನನ್ನಾದರೂ ನೀಡಬೇಕೆಂಬ ಗುಣ ಮೆಚ್ಚುವಂತದ್ದು. ಇವರ ಸಾಮಾಜಿಕ ಕಾರ್ಯಕ್ರಮಗಳಿಗೆ ನಾನು ಹಲವು ಬಾರಿ ಭಾಗವಹಿಸಿದ್ದೇನೆ ಇಂಥ ಗುಣವುಳ್ಳ ನಂಜೇಗೌಡರ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ನಂಜುಂಡಯ್ಯ ಮಾತನಾಡಿ, ಇದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಕೆಂಪೇಗೌಡರವರ ದೂರ ದೃಷ್ಟಿಯ ಫಲವಾಗಿ ಇಂದು ಬೆಂಗಳೂರು ವಿಶ್ವವಿಖ್ಯಾತವಾಗಿದೆ. ಕೆಂಪೇಗೌಡರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ಜಯಂತಿ ಆಚರಣೆ ಮಾಡುತ್ತಿರುವುದು ಸರಿಯಲ್ಲ ಇವರು ಸರ್ವರ ಅನುಕೂಲಕ್ಕಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದರು. ಇವರ ಈ ನಿಲುವಿನಿಂದಾಗಿ ಕೆಂಪೇಗೌಡರು 34 ಪೇಟೆಗಳನ್ನು ನಿರ್ಮಿಸಿ, ಕ್ರಮಬದ್ಧವಾಗಿ ವೈಜ್ಞಾನಿಕ ಕೆರೆಗಳನ್ನು ನಿರ್ಮಿಸಲು ಸಾಧ್ಯವಾಯಿತು ಎಂದರು. ಇವರ ಅವಧಿಯಲ್ಲಿ ಕೃಷಿ ಕ್ಷೇತ್ರ ಸೇರಿದಂತೆ ವ್ಯಾಪಾರ, ಶಿಕ್ಷಣ, ಸಮುದಾಯದ ಏಳಿಗೆ ಸಾಹಿತ್ಯ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡಿದ ಫಲವಾಗಿ ಇಂದು ಬೆಂಗಳೂರು ಪ್ರಸಿದ್ಧಿಯಾಗಲು ಕಾರಣವಾಗಿದೆ ಎಂದರು.
ಸ್ಮಾರ್ಟ್ ಕ್ವಿಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪು ಗೌಡ, ಮಾತನಾಡಿ ನಾವು ಇಂದು ಒತ್ತಡದ ಜೀವನ ನಡೆಸುತ್ತಿದ್ದೇವೆ ಆದರೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಕೆಲಸವನ್ನು ಮಾಡಬೇಕು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಜವಾಬ್ದಾರಿ ಪಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು.
ನಾವು ಕಟ್ಟಿದ ಬೆಂಗಳೂರಿನಲ್ಲಿ ನಾವು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿದ್ದೇವೆ ಆದರೆ ಬೇರೆಯವರು ಇಲ್ಲಿ ಬಂದು ಕಂಪನಿಗಳನ್ನು ಕಟ್ಟಿ ಬೆಳೆಯುತ್ತಿದ್ದಾರೆ ಅದರಂತೆ ನಮ್ಮ ಜನತೆ ಬೆಳೆದು ನಿಲ್ಲಬೇಕು ನಿಟ್ಟಿನಲ್ಲಿ ಯುವ ಸಮುದಾಯ ಹೆಚ್ಚು ಜಾಗೃತರಾಗಬೇಕೆಂದು ತಿಳಿಸಿದರು.
ಈ ವೇಳೆ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ರ‌್ಯಾಂಕ್ ಪಡೆದ ಎಸ್.ಶ್ರೇಯಸ್ ಅವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕುಂಚಿಟಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಮಹಾಸ್ವಾಮೀಜಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ವಿ.ಸುರೇಶ್, ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಮುಖ್ಯಸ್ಥೆ ಡಾ.ನವಿತಾ ತಿಮ್ಮಯ್ಯ, ಐಕಾನಿಕ್ ಹಾಸ್ಪಿಟಲ್ ವ್ಯವಸ್ಥಾಪಕ ನಿರ್ದೇಶಕ ಭರತ್ ದೇವರಾಜಪ್ಪ , ತಾಲೂಕು ಬಿಜೆಪಿ ಘಟಕ ಅಧ್ಯಕ್ಷ ವಿ.ರಾಜೇಂದ್ರ, ಕಾರ್ಯಕ್ರಮದ ಸಂಚಾಲಕ ನಾಗಣ್ಣ ಗೌಡ, ಬಿ.ಎಸ್. ಕುಮಾರ್ ಸೇರಿದಂತೆ ಒಕ್ಕಲಿಗ ಯುವ ಬ್ರಿಗೇಡ್ ಸದಸ್ಯರು ಇದ್ದರು.