

ರಾಮನಗರ : ರೇಷ್ಮೆ ಇಲಾಖೆ ಮತ್ತು ಕೇಂದ್ರ ರೇಷ್ಮೆ ಮಂಡಳಿ ನೇತೃತ್ವದಲ್ಲಿ ರೇಷ್ಮೆ ವಿಜ್ಞಾನಿಗಳು ಹಾಗೂ ಭಾಗೀದಾರರ ಜತೆ ಮಂಗಳವಾರ ಸಂವಾದ ಕಾರ್ಯಕ್ರಮ ನಡೆಯಿತು.
ರಾಮನಗರದ ರೇಷ್ಮೆ ಬಿತ್ತನೆ ಕೋಠಿ ಕಚೇರಿಯಲ್ಲಿ ರೀಲರ್ಸ್‌ಗಳು, ಚಾಕಿ ಸಾಕಣೆದಾರರು ಹಾಗೂ ರೇಷ್ಮೆ ಬೆಳೆಗಾರ ರೈತರು ಮೊಟ್ಟೆ ತಯಾರಕರು ಸೇರಿ ಭಾಗೀದಾರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರೈತರಿಗೆ ರೇಷ್ಮೆ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡುತ್ತಿಲ್ಲ. ಬೆಳೆಗಾರರಿಗೆ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸುವ ಮೊದಲು ರೈತರಿಗೆ ರೀಲರ್ಸ್‌ಗಳಿಗೆ ತಳಿಯಿಂದ ಆಗು ಹೋಗುಗಳ ಬಗ್ಗೆ ತಿಳಿಸಬೇಕು ಎಂದು ಸಭೆಯಲ್ಲಿ ರೈತ ಮುಖಂಡರು ತಿಳಿಸಿದರು.
ರೀಲರ್ಸ್ ಸಂಘದ ಅಧ್ಯಕ್ಷ ಪರ್ವೇಜ್ ಪಾಷಾ ಮಾತನಾಡಿ, ರೇಷ್ಮೆ ಇಲಾಖೆಗೆ ಸಾಕಷ್ಟು ಜಾಗ ಇದೆ. ಹೊಸ ತಳಿ ತರುವ ಮೊದಲು ರೇಷ್ಮೆ ಇಲಾಖೆಯೇ ಹುಳು ಸಾಕಣೆ ಮಾಡಿ ನಂತರ ಮಾರುಕಟ್ಟೆಗೆ ಗೂಡು ತಂದು ರೈತರಿಗೆ ಹೊಸ ತಳಿಯ ಬಗ್ಗೆ ಅರಿವು ಮೂಡಿಸಬೇಕು. ಅದು ಬಿಟ್ಟು ನೇರವಾಗಿ ರೈತರಿಗೆ ಕೊಟ್ಟು ರೈತರ ಮೇಲೆ ಹಾಕಿ ನಷ್ಟಕ್ಕೆ ದೂಡುತ್ತೀರಾ ಎಂದು ಪ್ರಶ್ನಿಸಿದರು. ರೀಲರ್ಸ್‌ಗಳು ಹಾಗೂ ರೇಷ್ಮೆ ಬೆಳೆಗಾರರು ಗಾಡಿಯ ಎರಡು ಚಕ್ರಗಳಿದ್ದಂತೆ, ರೀಲರ್ಸ್‌ಗಳ ಸಮಸ್ಯೆ ಆಲಿಸಬೇಕು. ರೇಷ್ಮೆ ನೂಲುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿದಲ್ಲಿ ಮಾತ್ರ ರೈತರು ನಿರೀಕ್ಷಿಸುವ ದರ ಕೊಡಲು ಸಾಧ್ಯ ಎಂದರು.
ಕೇಂದ್ರ ರೇಷ್ಮೆ ಮಂಡಳಿ ಜಂಟಿ ನಿರ್ದೇಶಕ ನರೇಶ್ ಬಾಬು ಮಾತನಾಡಿ, ಹೊಸ ತಳಿ ಸಾಕಾಣಿಗೆ ಕುರಿತಂತೆ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಹೊಸ ತಳಿ ಬಗ್ಗೆ ರೈತರಿಗೆ ಮೊಟ್ಟೆಯಿಂದ ಹುಳು ಸಾಕಣೆ, ಗೂಡು ಬಿಚ್ಚಾಣಿಕೆ ಸೇರಿ ಪ್ರಾತ್ಯಕ್ಷಿಕೆ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ರಾಮನಗರ ಮಾರುಕಟ್ಟೆಗೆ ಬರುತ್ತಿರುವ ಆಯಾ ರಾಜ್ಯಗಳ ರೇಷ್ಮೆ ತಳಿ ಬಗ್ಗೆ ಮಾಹಿತಿ ಪಡೆದು ಎಲ್‌ಎಸ್‌ಪಿ ಮೊಟ್ಟೆ ವಿತರಣೆ ಮತ್ತು ಸಿಎಸ್‌ಪಿ ಮೊಟ್ಟೆ ವಿತರಣೆ ಶೇಕಡಾವಾರು ಮಾಹಿತಿ ನೀಡುವಂತೆ ಸ್ಥಳೀಯ ರೇಷ್ಮೆ ಅಧಿಕಾರಿಗಳಿಗೆ ಸೂಚಿಸಿದರು.
ರೇಷ್ಮೆ ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ, ಹಿಪ್ಪು ನೇರಳೆ ಗಿಡಕ್ಕೆ ತಗಲಿರುವ ರೋಗದ ಸಮಸ್ಯೆ, ಜಿಲ್ಲೆಯಲ್ಲಿ ನಿಷ್ಕ್ರಿಯಗೊಂಡಿರುವ ಕೆಎಸ್‌ಎಂಬಿ ಸಂಸ್ಥೆ ಪುನಃಶ್ಚೇತನ, ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಸೇರಿ ಅನೇಕ ಸಮಸ್ಯೆಗಳನ್ನು ರೇಷ್ಮೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ವಿಜ್ಞಾನಿಗಳಾದ ಅರುಣಾಪುರ್, ಹಿರೇಮಠ್, ರಾಧ, ಶಿವಕುಮಾರ್, ಜಂಟಿ ನಿರ್ದೇಶಕ ರವಿಕುಮಾರ್, ರೇಷ್ಮೆ ಮಾರುಕಟ್ಟೆ ಉಪ ನಿರ್ದೇಶಕ ಬೀಮಪ್ಪ, ರೇಷ್ಮೆ ಇಲಾಖೆ ಅಧಿಕಾರಿಗಳಾದ ಕುಮಾರಸ್ವಾಮಿ, ಬೆಟ್ಟರಂಗಯ್ಯ, ರೈತ ಮುಖಂಡರಾದ ಕೆ. ರವಿ, ಗೌತಮ್, ಪ್ರಕಾಶ್, ಪಾರ್ಥ, ಹರೀಶ್‌ರೆಡ್ಡಿ ರೀಲರ್ಸ್‌ಗಳಾದ ಅಕ್ಲೀಂ , ಪ್ಯಾರಿ ಫಯಾಜ್ ಇದ್ದರು.