ಕರಗ ಮಹೋತ್ಸವಕ್ಕೆ ರಸ್ತೆಗಳು ಸಜ್ಜಾಗಲಿ

FotoJet (1)
Published on

 ಗುಂಡಿ ಮುಚ್ಚಿಸಲು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಸೂಚನೆ | ವಿಶೇಷ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

ರಾಮನಗರ : ನಗರದ ಶಕ್ತಿ ದೇವತೆಗಳ ಕರಗ ಮಹೋತ್ಸವಕ್ಕೆ ನಗರ ಸಜ್ಜಾಗುತ್ತಿದ್ದು, ರಸ್ತೆಗಳ ಸಮರ್ಪಕ ನಿರ್ವಹಣೆಗೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ತಿಳಿಸಿದರು.

ನಗರಸಭೆ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರು, ಚರಂಡಿ, ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಸಂಬಂಧಿಸಿದಂತೆ ರಸ್ತೆ ಸಮಸ್ಯೆಗೆ ಈಗಾಗಲೇ ನಗರೋತ್ಥಾನದಡಿ ನಗರದ ಕೆಲವು ರಸ್ತೆಗಳಿಗೆ ಕಾಂಕ್ರೀಟ್ ಮತ್ತು ಡಾಂಬರ್ ಹಾಕಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನೂ ಬಹಳಷ್ಟು ರಸ್ತೆಗಳು ಅಭಿವೃದ್ಧಿ ಆಗಬೇಕಿದೆ. ಕರಗ ಮಹೋತ್ಸವ ಕಾರಣ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಲು ಹಾಗೂ ಕರಗ ಸಂಚರಿಸುವ ರಸ್ತೆಗಳನ್ನು ಗುರುತಿಸಿ ಸಮರ್ಪಕ ನಿರ್ವಹಣೆ ಮಾಡಿ. ತಾತ್ಕಾಲಿಕವಾಗಿಯಾದರೂ ರಸ್ತೆ ಗುಂಡಿ ಮತ್ತು ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಗುಂಡಿ ಮುಚ್ಚಿಸಿ

ಕರಗ ಸಂಚರಿಸುವ ರಸ್ತೆಗಳು ಸಮರ್ಪಕವಾಗಿಲ್ಲ. ಐಜೂರು ಭಾಗ, ಟ್ರೂಫ್‌ಲೈನ್, ವಿನಾಯಕನಗರ, ಮಂಡೀಪೇಟೆ, ಬಾಲಗೇರಿ ಮತ್ತಿತರ ಕಡೆ ರಸ್ತೆ ಗುಂಡಿ ಬಿದ್ದಿವೆ. ರಸ್ತೆಗೆ ಹಾಕಿರುವ ಕಲ್ಲು ಎದ್ದಿವೆ. ಪೈಪ್ ಅಳವಡಿಕೆಗೆ ತೆಗೆದ ಗುಂಡಿ ಮುಚ್ಚಿಲ್ಲ. ನಗರಸಭೆಯಲ್ಲಿರುವ ಜೆಸಿಬಿಗಳಿಂದಾದರೂ ಗುಂಡಿ ಮುಚ್ಚಿಸಿ ಎಂದು ನಗರಸಭೆ ಸದಸ್ಯರು ಸಭೆಯಲ್ಲಿ ಪಕ್ಷಾತೀತವಾಗಿ ಒತ್ತಾಯಿಸಿದರು.

ಕರಗಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುತ್ತಾರೆ. ದೇವಾಲಯಗಳಿಗೆ ಮಹಿಳೆಯರು ಆರತಿ ಹಿಡಿದು ಬರಿಗಾಲಿನಲ್ಲಿ ತೆರಳುತ್ತಾರೆ. ಕರಗ ಸಂಚರಿಸಲು ರಸ್ತೆ ಸಮಸ್ಯೆಯಾಗಬಾರದು, ಆ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಕೆಲಸ ಆಗಲಿಲ್ಲ ಎನ್ನಬೇಡಿ. ಶಾಶ್ವತವಾಗಿ ಅಲ್ಲದಿದ್ದರೂ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಬೇಕು ಎಂದು ಇಂಜಿನಿಯರ್, ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸದಸ್ಯರ ನಡುವೆ ಮಾತಿನ ಜಟಾಪಟಿ

28ನೇ ವಾರ್ಡಿನ ಈದ್ಗಾ ಮೈದಾನ ಜಾಗದಲ್ಲಿ ಕಾಂಪೌಂಡ್ ಎತ್ತರಿಸಲಾಗುತ್ತಿದೆ. ಈ ಹಿಂದೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಅದಕ್ಕೆ ಅನುದಾನ ನೀಡಿದ್ದರು. ಕಾರಣಾಂತರಗಳಿಂದ ಕೆಲಸ ಅರ್ಧಕ್ಕೆ ನಿಂತಿತ್ತು. ಆದರೆ, ಈಗ ಏಕಾಏಕಿ ನಗರಸಭೆಗೆ ಅಧ್ಯಕ್ಷರು, ವಾರ್ಡಿನ ಸದಸ್ಯನಾದ ನನ್ನ ಗಮನಕ್ಕೂ ತರದೆ ಕೆಲಸ ನಡೆಸುತ್ತಿದ್ದಾರೆ. ಅಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ. ಇಂಜಿನಿಯರ್ ಸ್ಥಳಕ್ಕೆ ಬಂದು ನೋಡುತ್ತಿಲ್ಲ. ಕ್ಯೂರಿಂಗ್ ಮಾಡುತ್ತಿಲ್ಲ ಎಂದು ಜೆಡಿಎಸ್ ಸದಸ್ಯ ಮಂಜುನಾಥ್ ದೂರಿದರು.

ಈ ವೇಳೆ ನಗರಸಭಾ ಸದಸ್ಯರಾದ ಅಕ್ಲೀಂ, ಮೊಹಿನ್, ನಿಜಾಂ ಅವರು ಮಂಜುನಾಥ್ ಮೇಲೆ ಸಿಟ್ಟಾಗಿ ಈದ್ಗಾ ಕಾಂಪೌಂಡ್ ಕೆಲಸ ಆಗಲಿ. ಕೆಲಸ ನಿಲ್ಲಿಸಿ ಎಂದು ಏಕೆ ಹೇಳುತ್ತೀರಿ ಎಂದು ಹರಿಹಾಯ್ದರು. ಇದೇ ಸಂದರ್ಭದಲ್ಲಿ ಜೆಡಿಎಸ್‌ನ ರಮೇಶ್, ಗ್ಯಾಬ್ರಿಲ್, ಮಂಜುಳಾ, ಮಹಾಲಕ್ಷ್ಮೀ ಆಕ್ಷೇಪ ವ್ಯಕ್ತಪಡಿಸಿ, ನಾವು ಕೆಲಸ ನಿಲ್ಲಿಸಿ ಎಂದು ಹೇಳುತ್ತಿಲ್ಲ. ನಗರಸಭೆ ಗಮನಕ್ಕೆ ಏಕೆ ತಂದಿಲ್ಲ ಎಂದು ಕೇಳುತ್ತಿದ್ದೇವೆ ಎಂದರು. ಈ ಮಧ್ಯೆ ಎರಡೂ ಕಡೆ ಸದಸ್ಯರ ಮಾತಿನ ಭರಾಟೆ ತುಸು ಹೆಚ್ಚಾಗಿತ್ತು. ಅಧ್ಯಕ್ಷ ಕೆ. ಶೇಷಾದ್ರಿ ಎಲ್ಲರನ್ನೂ ಸಮಾಧಾನಿಸಿ ನಂತರ ಮತ್ತಿತರ ವಿಷಯಗಳ ಕಡೆ ಸಭೆ ನಡೆಸಿದರು.

ಬಳಿಕ, ನಗರಸಭೆ ಇಂಜಿನಿಯರ್ ಮೇಲೆ ಸಿಟ್ಟಾದ ಶೇಷಾದ್ರಿ, ಕಾಂಪೌಂಡ್ ಕೆಲಸ ಮಾಡುತ್ತಿದ್ದರೂ ನಮ್ಮ ಗಮನಕ್ಕೆ ಏಕೆ ತಂದಿಲ್ಲ. ಹಾಗಾದರೆ ಜವಾಬ್ದಾರಿ ನಮಗಿಲ್ಲವೇ?, ಸ್ಥಳಕ್ಕೆ ಹೋಗಿದ್ದೀರಾ? ಕೆಲಸ ನೋಡಿದ್ದೀರಾ ಎಂದು ಗರಂ ಆದರು.

ಪೌರಾಯುಕ್ತ ಡಾ.ಜಯಣ್ಣ, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ನಗರಸಭಾ ಸದಸ್ಯರಾದ ಪಾರ್ವತಮ್ಮ, ಮಂಜುನಾಥ್, ವಿಜಯಕುಮಾರಿ, ಸೋಮಶೇಖರ್, ಗಿರಿಜಮ್ಮ, ನಿಜಾಂ, ನರಸಿಂಹ, ರಮೇಶ್, ಮಂಜುಳಾ, ಮಹಾಲಕ್ಷ್ಮೀ, ಅಜ್ಮತ್, ಗ್ಯಾಬ್ರಿಲ್, ಜಯಲಕ್ಷ್ಮಮ್ಮ, ಬೈರೇಗೌಡ, ಸಮದ್, ನಾಗಮ್ಮ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net