ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಲಿ

ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಲಿ
Published on

ಕುಶಾಲನಗರ: ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಿ ಸಹಕರಿಸಿದರೆ ಮಾತ್ರ ಪಟ್ಟಣ ಅಪರಾಧಮುಕ್ತವಾಗಲು ಸಾಧ್ಯ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅಭಿಪ್ರಾಯಪಟ್ಟರು.

ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ವೇಗದ ಅಭಿವೃದ್ಧಿಯ ನಡುವೆ ಕಳ್ಳತನ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜನಸಂಖ್ಯೆ ಹೆಚ್ಚಳ ನಡುವೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಸ್ವಚ್ಛ ಸಮಾಜ ನಿರ್ಮಾಣ ಹಾಗೂ ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.

ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮಾತನಾಡಿ, ಸೋಮವಾರಪೇಟೆ ಉಪ ವಿಭಾಗದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಪರಾಧಮುಕ್ತ ಸಮಾಜದ ಬಗ್ಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆಯ ಮೂಲಕ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳನ್ನು ಪೊಲೀಸ್ ನೈಟ್ ಬೀಟ್ ಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದರು.

ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸದಂತೆ ಕಿವಿಮಾತು ಹೇಳಿದರು. ಅಪರಾಧ, ವಂಚನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆೆಯ ಗಮನಕ್ಕೆ ತರುವಂತೆ ನಿರ್ದೇಶನ ನೀಡಿದರು. ಕುಶಾಲನಗರ ಪಟ್ಟಣ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ಮತ್ತು ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net