

*ನಿರಂತರ ದಾಳಿಯೊಂದೇ ಮಾರ್ಗ
*ಕಠಿಣ ಕ್ರಮದ ಅಗತ್ಯ
ಗಂಗಾಧರ್ ಬೈರಾಪಟ್ಟಣ,
ರಾಮನಗರ
ಜಿಲ್ಲೆಯಲ್ಲಿ ಕಸದ್ದೇ ಕಾರುಬಾರು. ಎಲ್ಲಿ ನೋಡಿದರಲ್ಲಿ ಕಸ, ಇದನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿದೆ.
ಈ ಸಮಸ್ಯೆಯ ಬಹುಪಾಲು ಹೆಗ್ಗಳಿಕೆ ಪ್ಲಾಸ್ಟಿಕ್‌ಗೆ ಹೋಗಬೇಕಿದೆ. ಸರ್ಕಾರಿ ಆದೇಶದ ಹೊರತಾಗಿಯೂ ಇದನ್ನು ಪ್ಲಾಸ್ಟಿಕ್ ನಿಷೇಧ ಎನ್ನುವುದು ಅಪರೂಪದ ಆಚರಣೆ ಆಗಿದೆ.
2022 ರಲ್ಲಿಯೇ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್ ಸಂಗ್ರಹ, ಮಾರಾಟ, ಬಳಕೆಯನ್ನು ನಿಷೇಧ ಮಾಡಿದೆ. ಇದನ್ನು ಸಂಪೂರ್ಣವಾಗಿ ಜಾರಿಗೆ ತರಬೇಕಾದ ಸ್ಥಳೀಯ ಆಡಳಿತ ಆಗೊಮ್ಮೆ ಈಗೊಮ್ಮೆ ರೈಡ್ ಎನ್ನುವ ಹೆಸರಲ್ಲಿ ಒಂದಿಷ್ಟು ಪ್ಲಾಸ್ಟಿಕ್ ಸಂಗ್ರಹ ಮಾಡಿ ಸುಮ್ಮನಾಗುತ್ತಿದೆ. ಇದರಿಂದಾಗಿ ಕಸದ ಭೂತ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಡುತ್ತಿದೆ.
ಹೆಚ್ಚುತ್ತಿದೆ: ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಪ್ಲಾಸ್ಟಿಕ್ ಬ್ಯಾನರ್‌ಗಳು, ಫ್ಲೆಕ್ಸ್‌ಗಳು ಹೋರ್ಡಿಂಗ್‌ಗಳು ನಗರದ ತುಂಬೆಲ್ಲ ರಾರಾಜಿಸುತ್ತಿವೆ. ಇದರ ಜತೆಗೆ ಅಂಗಡಿ, ಬೇಕರಿಗಳಲ್ಲೂ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ. ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬ್ಯಾನರ್‌ಗಳ ಹಾವಳಿ ಹೆಚ್ಚಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿ ವಿದ್ಯುತ್ ಕಂಬದಲ್ಲಿಯೂ ವಿವಿಧ ರಾಜಕೀಯ ಪಕ್ಷ, ಕಾರ್ಯಕರ್ತರು ಕಟ್ಟುವ ಶುಭಕೋರುವ ಬ್ಯಾನರ್‌ಗಳು ರಾರಾಜಿಸುತ್ತಲೇ ಇರುತ್ತವೆ.
ಇದು ಹೆದ್ದಾರಿಗೆ ಸೀಮಿತವಾಗದೆ, ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶದಲ್ಲಿಯೂ ಹಾವಳಿ ಹೆಚ್ಚಿದೆ. ಆದರೆ, ಇಷ್ಟೆಲ್ಲ ಬ್ಯಾನರ್‌ಗಳು ನಿಯಮ ಮೀರಿ ಸಾರ್ವಜನಿಕ ಪ್ರದೇಶದಲ್ಲಿ ಪ್ರದರ್ಶನಗೊಳ್ಳುತ್ತಿದ್ದರೂ ಸ್ಥಳೀಯ ಆಡಳಿತಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿವೆ.
ನಗರ ಪ್ರದೇಶ ವ್ಯಾಪ್ತಿಯಲ್ಲಿ ಕೇವಲ ಪ್ಲಾಸ್ಟಿಕ್‌ನಿಂದ ಮಾಡಿದ ಬ್ಯಾನರ್ ಬಂಟಿಂಗ್‌ಗಳನ್ನು ನಿಷೇಧ ಮಾಡಿರುವುದು ಮಾತ್ರವಲ್ಲದೆ, ಇವುಗಳ ಉತ್ಪಾದನೆ ಹಾಗೂ ಮುದ್ರಣವನ್ನೂ ನಿಷೇಧಿಸಲಾಗಿದೆ. ಉತ್ಪಾದನೆ ಮಾಡುವಂತಹ ಮುದ್ರಣದವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಇದರ ಜತೆಗೆ ಬಟ್ಟೆಯಲ್ಲಿ ತಯಾರು ಮಾಡಿದ ಬ್ಯಾನರ್‌ಗಳು, ಬಂಟಿಂಗ್‌ಗಳು, ಫ್ಲೆಕ್ಸ್‌ಗಳನ್ನು ಬಳಸಬಹುದಾಗಿದ್ದು, ಇದಕ್ಕೆ ನಗರಸಭೆ ಅನುಮತಿ ಪಡೆಯುವುದು ಕಡ್ಡಾಯ. ಒಂದು ವೇಳೆ ನಗರಸಭೆಯಿಂದ ಅನುಮತಿ ಪಡೆಯದೆ ಹೋದರೆ ಕಾನೂನು ಸಂಘರ್ಷಕ್ಕೆ ಒಳಗಾಗಬೇಕಾಗುವುದು ನಿಶ್ಚಿತ ಎನ್ನುವ ಎಚ್ಚರಿಕೆ ನೀಡಲಾಗಿತ್ತು. ಇದು ಯಾವುದೂ ಜಾರಿಗೆ ಬಂದೇ ಇಲ್ಲ.
ಕಸದ ಸಮಸ್ಯೆ ಎನ್ನುವುದು ಜನಪ್ರತಿನಿಧಿಗಳ ಬುಡಕ್ಕೆ ಬಂದು ನಿಂತಿದೆ. ದುರಂತವೆಂದರೆ ಸರ್ಕಾರ ಬ್ಯಾನರ್, ಫ್ಲೆಕ್ಸ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ, ಇದು ಹೆಚ್ಚಾಗಿ ಉಲ್ಲಂಘನೆ ಆಗುತ್ತಿರುವ ಪ್ರದೇಶದ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅವರ ಬೆಂಬಲಿಗರಿಂದಲೇ. ಇತ್ತೀಚೆಗೆ ಸಣ್ಣಪುಟ್ಟ ವಿಚಾರಕ್ಕೂ ಶುಭಕೋರುವ ಬ್ಯಾನರ್‌ಗಳು ವಿದ್ಯುತ್ ಕಂಬಗಳು, ಇಲ್ಲವೇ ಜಾಗ ಇದ್ದ ಕಡೆ ರಾರಾಜಿಸುತ್ತವೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಕೆಲವರು ಬ್ಯಾನರ್ ಕಟ್ಟಲು ಅನುಮತಿ ಪಡೆಯುತ್ತಿದ್ದರೂ ಇದರ ಸಂಖ್ಯೆ ಏರುತ್ತಿಲ್ಲ.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳ ನಂತರ ಮತ್ತೆ ಪ್ಲಾಸ್ಟಿಕ್ ವಿರುದ್ಧ ಸಮರವನ್ನು ಸ್ಥಳೀಯ ಸಂಸ್ಥೆಗಳು ಮಾಡುತ್ತಿವೆ. ವಿವಿಧ ಅಂಗಡಿ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶ ಪಡಿಸಿಕೊಳ್ಳುತ್ತಿವೆ. ಆದರೆ, ರೈಡ್ ಮಾಡಲು ಹೋದ ಅಧಿಕಾರಿಗಳು ಮತ್ತು ಪೌರ ಕಾರ್ಮಿಕ ಸಿಬ್ಬಂದಿಯ ಮೇಲೆಯೇ ದಬ್ಬಾಳಿಕೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಕಾರ್ಯಾಚರಣೆಗೆ ರಕ್ಷಣೆ ಇದ್ದರೆ ಒಳಿತು. ಇಲ್ಲವಾದರೆ ಪರಿಸರ ಮಾತ್ರವಲ್ಲದೇ, ಪರಿಸ್ಥಿತಿಯೂ ಕೆಡುವುದು ಖಚಿತ.
ಪ್ರಮಾಣ (ಕೆಜಿಗಳಲ್ಲಿ) ದಂಡ (ರೂ)
ಮಾಗಡಿ 250 2000
ರಾಮನಗರ 950 91840
ಕನಕಪುರ 6000 75000
ಬಿಡದಿ 1000 45000
ಚನ್ನಪಟ್ಟಣ 1450 6000
====
ಪ್ಲಾಸ್ಟಿಕ್ ನಿಯಂತ್ರಣ ಸಂಬಂಧ ನಗರಸಭೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಿರಂತರವಾಗಿ ಕಾರ್ಯಾಚರಣೆ ನಡೆಸಲು ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಮೊದಲಿಗೆ ಅರಿವು ಮೂಡಿಸುವುದು, ದಂಡ ಪ್ರಯೋಗದಂತಹ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಬಗ್ಗದಿದ್ದರೆ ಪ್ರಕರಣ ದಾಖಲು ಮಾಡಲು ಕ್ರಮವಹಿಸಲಾಗುವುದು.
ಜಯಣ್ಣ, ಆಯುಕ್ತ, ರಾಮನಗರ ನಗರಸ‘ೆ
=
ಪ್ಲಾಸಿಕ್ ಇಂದು ವ್ಯಾಪಕವಾಗುತ್ತಿದೆ. ಇದರ ನಿಯಂತ್ರಣ ತಪ್ಪಿದರೆ ಗ್ರಾಮೀಣ ಪ್ರದೇಶವೂ ಪ್ಲಾಸ್ಟಿಕ್ ಮಯವಾಗಲಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮೂಲದಿಂದಲೇ ಪ್ಲಾಸ್ಟಿಕ್ ನಿಷೇಧ ಮಾಡಬೇಕು. ಸಾರ್ವಜನಿಕರೂ ಇದಕ್ಕೆ ಕೈ ಜೋಡಿಸಬೇಕು.
ಸಿ.ಪುಟ್ಟಸ್ವಾಮಿ, ರೈತ ಮುಖಂಡ