

ಮಾಗಡಿ: ದಲಿತರ ಸಮಸ್ಯೆಗಳನ್ನು ನ್ಯಾಯಯುತವಾಗಿ ಇತ್ಯರ್ಥಪಡಿಸುವಂತೆ ಶಾಸಕ ಎಚ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ತಾಕಿತು ಮಾಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ಎಸ್ಸಿ, ಎಸ್ಟಿ ಪಂಗಡಗಳಿಗೆ ಭೂ ಮಂಜೂರಾತಿ ಹಕ್ಕುಪತ್ರ ವಿತರಿಸಲು ಸ್ಥಳ ಪರಿಶೀಲಿಸಿ, ಅಗತ್ಯಕ್ರಮ ಕೈಗೊಳ್ಳಬೇಕು, ಕಾಲನಿಗಳಿಗೆ ಇರುವ ರಸ್ತೆಗಳನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕರು ತಿರುಗಾಡುವ ರಸ್ತೆ ಬಿಡದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಪಂ ಮಾಜಿ ಅಧ್ಯಕ್ಷ ಜಿ.ಕೃಷ್ಣ ಮಾತನಾಡಿ, 2019 ರಿಂದ ಅಂಬೇಡ್ಕರ್, ವಾಲ್ಮೀಕಿ ಸೇರಿ ಇತರೆ ನಿಗಮ ಮಂಡಳಿಯಿಂದ ದಲಿತರಿಗೆ ಕೊಳವೆ ಬಾವಿ ಕೊರೆಸಿಕೊಟ್ಟಿಲ್ಲ. ಇದರಿಂದ ಅನ್ಯಾಯವಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಜಿಲ್ಲೆಯ ಸಮಾಜ ಕಲ್ಯಾಣಾಧಿಕಾರಿ ಸಸ್ಪೆಂಡ್ ಮಾಡಲಾಗಿತ್ತು. ಈಗ ಪ್ರಭಾವಿ ನಾಯಕರು ಮತ್ತೆ ಅವರನ್ನು ಅಲ್ಲಿಗೆ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಸ್ಮಶಾನಕ್ಕಾಗಿ ಭೂಮಿ ಖರೀದಿಸಿದರೆ ಅದಕ್ಕೆ ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು ಎಂದರು.
ಕುದೂರು ಹೋಬಳಿ ಉಪತಹಸೀಲ್ದಾರ್ ನಾಗರಿಕರಿಗೆ ಸ್ಪಂದಿಸುತ್ತಿಲ್ಲ. ದಲಿತರಿಗೆ ಮೀಸಲಾದ ಅಂಗಡಿ ಮಳಿಗೆ ಹಂಚಿಕೆ ಮಾಡಿಲ್ಲ ಎಂದು ಸಭೆಯ ಗಮನಕ್ಕೆ ತಂದ ವೇಳೆ ಕೂಡಲೇ ಕಾನೂನು ರೀತಿ ಕ್ರಮಕೈಗೊಳ್ಳದಿದ್ದರೆ ಸೂಪರ್ ಸೀಡ್ ಮಾಡಿಸಲಾಗುವುದು. ಇದು ಎಲ್ಲ ಗ್ರಾಪಂಗಳಿಗೆ ಎಚ್ಚರಿಕೆಯಾಗಬೇಕೆಂದು ಇಒ ಜಯಪಾಲ್ ಪಿಡಿಒಗೆ ಎಚ್ಚರಿಸಿದರು. ಜೀವಿಕ ಸಂಘಟನೆ ಜೀವಿಕ ಗಂಗಹನುಮಯ್ಯ ಮಾತನಾಡಿ, ಜೀತಪದ್ದತಿ ಮಾಡುತ್ತಿದ್ದ 38 ಮಂದಿಗೆ ಬಿಡುಗಡೆ ಪತ್ರ ನೀಡಿಲ್ಲ, 38 ಮಂದಿ ಜೀವಂತವಾಗಿದ್ದರೂ ಮರಣಪತ್ರ ನೀಡಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಂದು ಶಾಸಕರ ಗಮನಕ್ಕೆ ತಂದರು. ಇನ್ನೊಂದು ವಾರದ ಒಳಗೆ ಸೂಕ್ತ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಶರತ್ ಕುಮಾರ್‌ಗೆ ಸೂಚಿಸಿದರು.
ದಲಿತ ಮುಖಂಡೆ ವನಜಾ ಮಾತನಾಡಿ, ದಲಿತ ಹೋರಾಟಗಾರರಿಗೆ ರೌಡಿ ಶೀಟರ್ ಕೇಸ್ ದಾಖಲಿಸಿದ್ದಾರೆ. ಕೂಡಲೇ ವಜಾಗೋಳಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಅಂತಹ ಕೇಸ್ ಇರುವರು ಅರ್ಜಿ ನೀಡಿದರೆ ಎಸ್‌ಪಿ ಅವರೊಂದಿಗೆ ಚರ್ಚಿಸಿ ರೌಡಿ ಶೀಟರ್ ರದ್ದುಗೊಳಿಸುವುದಾಗಿ ಶಾಸಕರು ತಿಳಿಸಿದರು.
ದಲಿತ ಮುಖಂಡ ಚಿಕ್ಕರಾಜು ಮಾತನಾಡಿ, 272 ಗ್ರಾಮಗಳಲ್ಲಿ ಸ್ಮಶಾನ ಸಮಸ್ಯೆಯಿದೆ. 8 ವರ್ಷದ ಹಿಂದೆ ಸ್ಮಶಾನಕೆಂದು ಜಾಗ ಮಂಜೂರಾಗಿದೆ. ಎಲ್ಲಿ ಜಾಗ ಎಂದು ನಿಗದಿಪಡಿಸಿಲ್ಲ. ಸಮಸ್ಯೆ ಬಗೆಹರಿಸಿಕೊಡದಿದ್ದರೆ ತಾಲೂಕು ಕಚೇರಿ ಮುಂದೆ ಅಂತ್ಯಕ್ರಿಯೆ ಮಾಡುವುದಾಗಿ ಎಚ್ಚರಿಸಿದರು.
ದಲಿತ ಮುಖಂಡ ಹೊಸಹಳ್ಳಿ ಪುಟ್ಟಸ್ವಾಮಿ ಮಾತನಾಡಿದರು.
ಸೀಗೆಕುಪ್ಪೆ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ನಿವೇಶನವನ್ನು ಬಲಾಢ್ಯರೊಬ್ಬರು ಪೌತಿಖಾತೆ ಮಾಡಿಸಿಕೊಂಡಿದ್ದಾರೆ. ಆಂಜನೇಯ ಸ್ವಾಮಿ ದೇವಾಲಯದ ಖಾತೆ ಏಗಾಗಿದೆ ಎಂದು ಆಂಜನೇಯ ಸ್ವಾಮಿಯ ವಂಶವೃಕ್ಷ ಕೋರಿ ತಾಲೂಕು ಕಚೇರಿಗೆ ಮಾಹಿತಿ ಹಕ್ಕಿನಡಿ ಅರ್ಜಿಸಲ್ಲಿಸಿದ್ದೇನೆ. ಇಲ್ಲಿಯವರೆಗೂ ಮಾಹಿತಿ ನೀಡದೆ ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಬೆಟ್ಟಯ್ಯ ಎಂಬುವವರು ತಹಸೀಲ್ದಾರ್ ಗಮನಕ್ಕೆ ತಂದರು. ಈ ಸಂಬಂಧ ತನಿಖೆ ನಡೆಸುವುದಾಗಿ ಬೆಟ್ಟಯ್ಯಗೆ ಉತ್ತರಿಸಿದರು.
ಸಮಾಜ ಕಲ್ಯಾಣ ಇಲಾಖೆ ಪ್ರಕಾಶ್, ಇನ್‌ಸ್ಪೆಕ್ಟರ್ ಜಿ.ವೈ. ಗಿರಿರಾಜು, ಕುದೂರು ನವೀನ್ ಕುಮಾರ್, ಪಾರೆಸ್ಟ್ ಚೈತ್ರಾ, ಬಿಇಒ ಚಂದ್ರಶೇಖರ್, ದೊಡ್ಡಿ ಲಕ್ಷ್ಮಣ, ಗೋಪಾಲ್, ಸುರೇಶ್, ತಾಪಂ ಮಾಜಿ ಸದಸ್ಯ ನರಸಿಂಹಮೂರ್ತಿ ಇತರರು ಇದ್ದರು.
ದಲಿತರು ವಾಸಿಸುವ ಗ್ರಾಮಗಳು ಕಂದಾಯ ಭೂಮಿಯಾಗಿ ಪರಿವರ್ತನೆಯಾಗಬೇಕು. ಸರ್ಕಾರದ ಅನುದಾನ ತಲುಪಿಸುವಲ್ಲಿ ಪಿಡಿಒ, ಕಾರ್ಯದರ್ಶಿ, ಅಧ್ಯಕ್ಷರು, ಸದಸ್ಯರು ವಂಚಿಸುತ್ತಿದ್ದಾರೆ. ಸರ್ಕಾರದ ಸುತ್ತೋಲೆಗಾಗಿ ದಲಿತರ ಕುಂದುಕೊರತೆ ಸಭೆ ನಡೆಸಬೇಡಿ, ಕಲ್ಯ ಗ್ರಾಪಂನ ಬಸವನಪಾಳ್ಯದಲ್ಲಿ ದಲಿತರಿಲ್ಲ. ಆ ಗ್ರಾಮಕ್ಕೆ ಪಿಡಿಒ ಅನುದಾನ ಹಾಕಿದ್ದಾರೆ ಎಂದು ತಾಪಂ ಮಾಜಿ ಸದಸ್ಯ ಸಿ. ಜಯರಾಮು ಆರೋಪಿಸಿದರು.
ಶೀಘ್ರ ಹಕ್ಕು
ಗೋಮಾಳ ಭೂಮಿಯನ್ನು ಉಳುಮೆ ಮಾಡಿಕೊಂಡು ಬರುತ್ತಿರುವ ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಹಕ್ಕು ಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಮಂಜೂರಾತಿ ಭೂಮಿಯನ್ನು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದನ್ನು ಪೋಡಿ ಮಾಡಲು ಸರ್ವೇ ಇಲಾಖೆಗೆ ಕಳುಹಿಸಿಕೊಡಲಾಗಿದೆ. ದಾಖಲೆಗಳು ಸರಿ ಇದ್ದರೆ ಏಕವ್ಯಕ್ತಿ ಪ್ರಕರಣ ಎಂದು ಪರಿಗಣಿಸಿ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಗೆ ಸೂಚಿಸಿದರು.