

ಹಾಸನ: ಕಾಲ ಬದಲಾದಂತೆ ವೈದ್ಯಕೀಯ ಶಿಕ್ಷಣವನ್ನು ಬೋಧಿಸುವ ಉಪನ್ಯಾಸಕರೂ ಬದಲಾಗಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ಚೇರ್ಮನ್ ಡಾ. ಡಿ.ವಿ. ಲೀಲಾಧರ ಹೇಳಿದರು.
ನಗರದ ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ಮರ್ಮೋಪಾಸನಾ 2025 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ ಚಿಕಿತ್ಸೆಯಲ್ಲಿ ಮರ್ಮ ಚಿಕಿತ್ಸೆಯ ಮಹತ್ವ ಹಾಗೂ ಚಿಕಿತ್ಸಾ ಜ್ಞಾನವನ್ನು ಎಲ್ಲ ವೈದ್ಯರಿಗೆ ಪಸರಿಸಲು ಇಂತಹ ಕಾರ್ಯಾಗಾರಗಳ ಅವಶ್ಯಕತೆ ಇದೆ. ಇಂತಹ ಅದ್ಭುತ ಕಾರ್ಯಾಗಾರವನ್ನು ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಯೋಜಿಸಿದ್ದು, ಅತ್ಯಂತ ಸಂತೋಷದ ವಿಷಯವಾಗಿದೆೆ ಎಂದು ಹೇಳಿದರು.
ರಾಯಲ್ ಅಪೋಲೋ ಸಮೂಹ ಸಂಸ್ಥೆಗಳ ಅಧ್ಯಕ್ಷ ಜೆ. ನವೀನ್ ಮಾತನಾಡಿ, ರಾಜೀವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ವಿ.ರಾಜೀವ್ ಅವರ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿ. ವಿದ್ಯಾರ್ಥಿ ಮತ್ತು ವೈದ್ಯರು ಡಾ.ವಿ.ರಾಜೀವ್ ಅವರ ಮಾರ್ಗವನ್ನೇ ಅನುಸರಿಸಿ ಸಮಾಜಕ್ಕೆ ಕೊಡುಗೆಯನ್ನು ನೀಡಿ ಆಯುರ್ವೇದವನ್ನು ವಿಶ್ವದೆಲ್ಲೆಡೆ ಮುನ್ನೆಲೆಗೆ ತರಬೇಕು ಎಂದು ಹೇಳಿದರು.
ರಾಯಲ್ ಅಪೋಲೋ ಅಂತಾರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ಡಾ. ಎಲ್.ಪಿ.ರವಿಕುಮಾರ್ ಮಾತನಾಡಿ, ದೇಶವನ್ನು ಭದ್ರ ಗೊಳಿಸಲು ಉನ್ನತ ಶಿಕ್ಷಣ ಮಹತ್ವದ್ದಾಗಿದೆ. ಶತಮಾನಗಳಷ್ಟು ಹಳೆಯದಾದ ಆಯುರ್ವೇದ ಪದ್ಧತಿಯಲ್ಲಿ ಆಚಾರ್ಯರಾದ ಚರಕ, ಶುಶ್ರುತರು ಅಂದಿನ ದಿನಗಳಲ್ಲೇ ಮಾನವನ ದೇಹದಲ್ಲಿ ಮರ್ಮ ಸ್ಥಾನಗಳನ್ನು ಗುರುತಿಸಿ ಅವುಗಳನ್ನು ಚಿಕಿತ್ಸೆ ನೀಡಲು ಬಳಸುತಿದ್ದದು ಅಚ್ಚರಿಯ ವಿಷಯ. ಇದರ ಚಿಕಿತ್ಸಾ ಪದ್ಧತಿ ಎಲ್ಲೆಡೆ ಬಳಕೆಯಾಗಿ ರೋಗಿಗಳು ಗುಣಮುಖರಾಗಲು ಸಹಕಾರಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜೀವ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ.ರಂಜಿತ್ ರಾಜೀವ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕಾರ್ಯಾಗಾರಗಳಿಂದ ಹೊಸತನ್ನು ತಿಳಿದುಕೊಳ್ಳಬಹುದು. ವೈದ್ಯಕೀಯ ಸಂಶೋಧನೆಗಳ ವಿಚಾರ ವಿನಿಮಯ ಚರ್ಚೆಯಾಗುವುದು ವೈದ್ಯಕೀಯ ಜ್ಞಾನವೃದ್ಧಿಗೆ ನೆರವಾಗಲಿದೆ. ರಾಜೀವ್ ಆಯುರ್ವೇದ ಕಾಲೇಜಿನಲ್ಲಿ ಎರಡನೇ ಬಾರಿಗೆ ರಾಷ್ಟ್ರೀಯ ಕಾರ್ಯಾಗಾರ ಆಯೋಜನೆಗೊಂಡಿರುವುದು ಸಂತಸದ ವಿಷಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎ.ನಿತಿನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿಶ್ವವು ಆಯುರ್ವೇದದತ್ತ ಮುಖ ಮಾಡಿದೆ. ಇದು ಮನುಷ್ಯನ ಆರೋಗ್ಯವನ್ನು ಕಾಪಾಡಲು ಆಯುರ್ವೇದದ ಮಹತ್ವವನ್ನು ತಿಳಿಸುತ್ತದೆ, ಆಯುರ್ವೇದವನ್ನು ಇನ್ನೂ ಮುನ್ನೆಲೆಗೆ ತರಲು ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಸದಾ ಕೈ ಜೋಡಿಸುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಕೇರಳದ ಆಯುರ್ವೇದ ಮರ್ಮ ಮತ್ತು ಔಷಧೀಯ ಸಸ್ಯಗಳ ಅಕಾಡೆಮಿ ನಿರ್ದೇಶಕ ಡಾ.ಅಜಯನ್ ಸದಾನಂದನ್ ಮತ್ತು ಅಷ್ಟಾಂಗ ಆಯುರ್ವೇದ ಚಿಕಿತ್ಸಾಲಯದ ಅಂಗ ರಚನಾ ವಿಭಾಗದ ಮುಖ್ಯಸ್ಥ ಡಾ. ಜಿತೇಶ್ ಚಂದ್ರನ್, ಕಾರ್ಯಕ್ರಮ ಸಂಯೋಜಕರಾದ ಡಾ.ಎಸ್.ಉಷಾ, ಡಾ.ಮೋನಿಕಾ ಸಿಂಗ್ ಇದ್ದರು. ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯಗಳ ವತಿಯಿಂದ ಮರ್ಮ ಚಿಕಿತ್ಸಾ- ಅಗಸ್ತ್ಯ ಮರ್ಮ ಚಿಕಿತ್ಸೆಯ ಮಹತ್ವ ಎಂಬ ಕಿರು ಕೈಪಿಡಿಯನ್ನು ಅನಾವರಣಗೊಳಿಸಲಾಯಿತು.