

ತಿ.ನರಸೀಪುರ: ಕನ್ನಡ ನಾಡಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ಆಡಳಿತ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಗೌರವಿಸಿ, ನಿತ್ಯವೂ ಬಳಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ ಹೇಳಿದರು.
ತಾಲೂಕಿನ ತಲಕಾಡು ಗ್ರಾಮದ ಶ್ರೀ ಬಂಡರಸಮ್ಮ ದೇವಾಲಯ ಆವರಣದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಾಗೂ ಹೋಬಳಿ ಮಟ್ಟದ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸ್ಥಳೀಯವಾಗಿ ಉದ್ಯೋಗ ಮತ್ತು ವ್ಯವಹಾರ ನಡೆಸಲು ವಾಸವಿರುವ ಅನ್ಯ ಭಾಷಿಕರು ನಾಡಿನ ಭಾಷೆಯನ್ನು ಕಲಿಯಬೇಕು. ಕನ್ನಡಿಗರಾದ ನಾವು ಕೂಡ ಅವರೊಡನೆ ಕನ್ನಡವನ್ನು ಉಳಿಸಿ ಬೆಳೆಸಲು ವ್ಯವಹಾರವೆಲ್ಲವನ್ನೂ ಕನ್ನಡದಲ್ಲಿ ಮಾಡಬೇಕು. ಮನೆಯಲ್ಲಿಯೂ ಕನ್ನಡದಲ್ಲಿ ಮಾತನಾಡಬೇಕು ಎಂದು ಸಲಹೆ ನೀಡಿದರು.
ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೀಗಾಗಿ ಮೊದಲ ನಾವು ಕನ್ನಡಕ್ಕೆ ಆದ್ಯತೆ ನೀಡಬೇಕು. ನಂತರ ಇಂಗ್ಲಿಷ್, ಹಿಂದಿಗೆ ಆದ್ಯತೆ ನೀಡಬೇಕು. ನಮ್ಮ ಕನ್ನಡಿಗರು ಎಲ್ಲ ದೇಶಗಳಲ್ಲಿದ್ದು, ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಕನ್ನಡಿಗರಾದ ನಮಗೆ ಸಂತೋಷ ತಂದಿದೆ. ಇನ್ನು ಎಂಬಿಬಿಎಸ್, ಬಿ.ಇ. ವಿದ್ಯಾಭ್ಯಾಸ ಮಾಡುವಂತಹ ಎಲ್ಲ ವಿದ್ಯಾರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಬಹುದು. ತಲಕಾಡು ಗಂಗರ ರಾಜಧಾನಿ. ಗಂಗಾ ಮಂತ್ರಿ ಚಾವುಂಡರಾಯ ಶ್ರವಣ ಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹವನ್ನು ಕೆತ್ತಿಸಿರುವ ಕೀರ್ತಿ ತಲಕಾಡಿಗಿದೆ. ಈ ವಿಗ್ರಹ ವಿಶ್ವದಲ್ಲೇ ಒಂದು ವಿಶೇಷ ವಿಗ್ರವಾಗಿದೆ ಎಂದು ಕನ್ನಡ ಪುಟ್ಟಸ್ವಾಮಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ನಾವೆಲ್ಲರೂ ಮಾತೃಭಾಷೆಯಾಗಿರುವ ಕನ್ನಡದ ಮೇಲೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ನಾಡಿನ ನೆಲ, ಜಲ, ಭಾಷೆ ರಕ್ಷಿಸುವ ಹೊಣೆ ಕನ್ನಡಿಗರಾದ ನಮ್ಮ ಹೊಣೆಗಾರಿಕೆಯಾಗಿದೆ. ವಿದ್ಯಾರ್ಥಿಗಳೂ ಕೂಡ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳನ್ನೂ ಕನ್ನಡದಲ್ಲಿ ವ್ಯಾಸಂಗ ಮಾಡಿಸುವಂತಾಗಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ನರಸೀಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಭಿಲಾಶ್, ಧಾರ್ಮಿಕ ಸೇವಾ ಸಮಿತಿಯ ಬಿ.ಶಂಕರ್, ಡಾ.ಮಧುಶ್ರೀ ಹಾಗೂ ಡಾ.ಆರ್ಪ ತಬಸಂ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ನಾಡು, ನುಡಿ ಬಗ್ಗೆ ನೃತ್ಯ, ಮಹಿಳೆಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಪಿ.ಎಂ.ವೆಂಕಟೇಶ್, ಗ್ರಾ.ಪಂ ಅಧ್ಯಕ್ಷೆ ಶೋಭಾ ಮಲ್ಲಣ್ಣಿ, ಉಪಾಧ್ಯಕ್ಷ ನಾಗರಾಜ್ ಮೂರ್ತಿ, ಆನಂದ ದೀಕ್ಷಿತ್, ಸೋಸಲೆ ಮಹದೇವಶೆಟ್ಟಿ, ಮಂಜುನಾಥ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಕಸಾಪ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಇದ್ದರು.