ಸರ್ಕಾರ ಗ್ರಾಪಂ ನೌಕರರ ಬೇಡಿಕೆಗೆ ಸ್ಪಂದಿಸಲಿ

GP
ಕಂಪ್ಲಿಯಲ್ಲಿ ಆಯೋಜಿಸಿದ್ದ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕು ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಆರ್.ಎಸ್.ಬಸವರಾಜ ಮಾತನಾಡಿದರು. ಪ್ರಮುಖರಾದ ಡಿ.ಎಂ.ಜಡೆಯ್ಯಸ್ವಾಮಿ, ಎಲ್.ಚಾಂದ್‌ಪಾಷಾ, ಜೆ.ಎಂ.ಚನ್ನಬಸಯ್ಯ, ಬೀರಲಿಂಗ, ಮಲ್ಲಿಕಾರ್ಜುನಸ್ವಾಮಿ ಇತರರಿದ್ದರು.
Published on

ಕಂಪ್ಲಿ: ಗ್ರಾಪಂ ಡಿದರ್ಜೆ ನೌಕರರಿಗೆ ಕನಿಷ್ಠ 25 ಸಾವಿರ ರೂ. ವೇತನ ನಿಗದಿಗೊಳಿಸಬೇಕು ಎಂದು ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್.ಬಸವರಾಜ್ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಭಾನುವಾರ ರಾಜ್ಯ ಗ್ರಾಪಂ ನೌಕರರ ಸಂಘ(ಸಿಐಟಿಯು ಸಂಯೋಜಿತ)ತಾಲೂಕು ಸಮಿತಿ ಆಯೋಜಿಸಿದ್ದ ಎರಡನೇ ತಾಲೂಕು ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಪಂನಲ್ಲಿ ಕೆಲಸ ಮಾಡುವ ನೌಕರರು ನಿವೃತ್ತಿ, ಮರಣ ಹೊಂದಿದಲ್ಲಿ ಮಾಸಿಕ 5000 ರೂ. ಪಿಂಚಣಿ ನೀಡುವ ಭರವಸೆ ಸರ್ಕಾರ ನೀಡಿದ್ದು, ಕೂಡಲೇ ಜಾರಿಗೊಳಿಸಬೇಕು.

ವೇತನ ಬಾಕಿ

ರಾಜ್ಯದಲ್ಲಿ ಈಗಾಗಲೇ 7 ಸಾವಿರ ಜನ ವಾಟರ್‌ಮನ್, ಜವಾನ, ಸ್ವೀಪರ್‌ಗಳು ಕೆಲಸ ನಿರ್ವಹಿಸುತ್ತಿದ್ದು ಅವರ ಶಿಕ್ಷಣಾರ್ಹತೆಗೆ ವಿನಾಯಿತಿ ನೀಡಿ ಕೂಡಲೇ ನೇಮಕಕ್ಕೆ ಅನುಮೋದಿಸಬೇಕು. 2015ರಿಂದ ಕೆಲ ಗ್ರಾಪಂಗಳಲ್ಲಿ ವೇತನ ಬಾಕಿ ಇದ್ದು ವಿತರಿಸಬೇಕು. ಗ್ರಾಪಂ ನೌಕರರು ವಿವಿಧ ಸಮಸ್ಯೆಗಳ ಸುಳಿಯಲ್ಲಿದ್ದು ರಾಜ್ಯ ಸರ್ಕಾರ ಗ್ರಾಪಂ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಗ್ರಾಪಂ ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ಡಿ.ಎಂ.ಜಡೆಯ್ಯಸ್ವಾಮಿ ಮಾತನಾಡಿದರು.

ಪಿಡಿಒ ಬೀರಲಿಂಗ, ರಾಜ್ಯ ಗ್ರಾಪಂ ನೌಕರರ ಸಂಘದ ಪದಾಧಿಕಾರಿಗಳಾದ ಎಲ್.ಚಾಂದ್‌ಪಾಷಾ, ಡಿ.ರಾಜಾಸಾಬ್, ವೀರಸೇನಾರೆಡ್ಡಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ, ಸಿಪಿಐಎಂ ಕಾರ್ಯದರ್ಶಿ ಬಂಡಿ ಬಸವರಾಜ, ಸಿಪಿಐಎಂ ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಐ.ಹೊನ್ನೂರಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net