ಮೇಲುಕೋಟೆಯಲ್ಲಿ ಹೂವಿನ ತೋಟಗಳು ಹೆಚ್ಚಾಗಲಿ

27mlk2
ಮೇಲುಕೋಟೆ ಕಲ್ಯಾಣಿಯ ಸಾಲುಮಂಟಪದ ಹಿಂಭಾಗ ತುಳಸಿಗಿಡ ನೆಟ್ಟು ತುಳಸಿ-ಹೂ ತೋಟ ನಿರ್ಮಿಸಲು ತೆಲಂಗಾಣ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಚಾಲನೆ ನೀಡಿದರು.
Published on

ಮೇಲುಕೋಟೆ: ಅಧಿದೈವ ಚೆಲುವನಾರಾಯಣಸ್ವಾಮಿಗೆ ಅರ್ಪಿಸಲು ನಿರ್ಮಿಸುತ್ತಿರುವ ತುಳಸಿ-ಹೂವಿನ ತೋಟಗಳು ಮೇಲುಕೋಟೆಯಲ್ಲಿ ಹೆಚ್ಚಾಗಲಿ ಎಂದು ತೆಲಂಗಾಣ ಪಾಂಡಿಚರಿ ಮತ್ತು ಜಾರ್ಖಂಡ್ ರಾಜ್ಯಗಳ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಆಶಿಸಿದರು.


ಅವರು ಕಲ್ಯಾಣಿಯ ಸಾಲುಮಂಟಪದ ಹಿಂಭಾಗ ತುಳಸಿಯ ಗಿಡನೆಟ್ಟು ತುಳಸಿ ತೋಟದ ನಿರ್ಮಾಣಕ್ಕೆ ಶುಭ ಹಾರೈಸಿದರು.
ರಾಮಾನುಜಾಚಾರ್ಯರ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ಅಧಿದೈವ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ನೆಲೆಸಿದ್ದಾರೆ. ಸ್ವಾಮಿಗೆ ಸಮರ್ಪಿಸಲು ಕಲ್ಯಾಣಿಯ ಬಳಿ ತುಳಸಿ ಮತ್ತು ಹೂವಿನ ತೋಟ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಉತ್ತಮ ಕಾರ್ಯಗಳು ನಿರಂತರವಾಗಿ ನಡೆಯಲಿ. ತುಳಸಿತೋಟ ಮಾಡಲು ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಶಿಬಿರಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಶ್ರಮಿಸಿದ್ದೀರಿ. ಇದಕ್ಕಾಗಿ ನಿಮಗೆ ಅಭಿನಂದನೆ ತಿಳಿಸುತ್ತೇನೆ ಎಂದರು.


ದೇವಾಲಯಗಳಿಗೆ ತುಳಸಿ ಮತ್ತು ಹೂವುಗಳನ್ನು ನೀಡಲು ಎಲ್ಲ ಕಡೆ ಪ್ರತ್ಯೇಕವಾದ ತೋಟಗಳಿವೆ. ಮೇಲುಕೋಟೆಯಲ್ಲೂ ಹಲವು ತೋಟಗಳಿವೆ ಎಂಬ ಮಾಹಿತಿ ಇದೀಗ ತಿಳಿಯಿತು. ಇವುಗಳನ್ನೂ ಗುರುತಿಸಿ ಅವುಗಳಿಗೆ ಜೀವ ತುಂಬುವ ಕಾರ್ಯ ಆಗಬೇಕು. ಇದು ಪರಿಸರ ಸಂರಕ್ಷಣೆಯ ಕೆಲಸವೂ ಆಗಿದೆ. ಮೇಲುಕೋಟೆಯ ಕಲ್ಯಾಣಿಯ ಬಳಿಯ ತುಳಸಿತೋಟ ಉತ್ತಮವಾಗಿ ನಿರ್ವಹಣೆಯಾಗಿ, ಚೆಲುವನಾರಾಯಣನಿಗೆ ತುಳಸಿ ಸಮರ್ಪಿಸುವ ಪ್ರಮುಖ ತೋಟವಾಗಲಿ. ಈ ನಿಟ್ಟಿನಲ್ಲಿ ದೇವಾಲಯದ ಆಡಳಿತ ಕಾಳಜಿ ವಹಿಸಲಿ ಸಲಹೆ ನೀಡಿದರು.
ಮೇಲುಕೋಟೆಗೆ ಬಂದ ರಾಜ್ಯಪಾಲರನ್ನು ಡಾ.ಪ್ರೀತಿಮಹದೇವ್, ಸ್ಥಾನೀಕಂ ಸಂತಾನ ರಾಮನ್ ತುಳಸಿಗಿಡ ನೆಟ್ಟು ಉದ್ದೇಶಿತ ತೋಟಕ್ಕೆ ಚಾಲನೆ ನೀಡಲು ಆಹ್ವಾನಿಸಿದ ಪರಿಣಾಮ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಮನವಿಗೆ ಸ್ಪಂದಿಸಿ ತುಳಸಿ ಗಿಡನೆಟ್ಟು ಪ್ರೋತ್ಸಾಹ ನೀಡಿದ್ದು ವಿಶೇಷವಾಗಿತ್ತು.


ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್‌ರ ಮಾರ್ಗದರ್ಶನದಲ್ಲಿ ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಶಿಬಿರಾಧಿಕಾರಿ ಎನ್.ಕೆ.ವೆಂಕಟೇಗೌಡ ನೇತೃತ್ವದಲ್ಲಿ ಕಲ್ಯಾಣಿಯ ಸಾಲುಮಂಟಪದ ಹಿಂಭಾಗ ಬೆಳೆದಿದ್ದ ಬೃಹತ್ ಗಿಡಗಂಟಿ ತೆರವುಗೊಳಿಸಿ ತುಳಸಿ ತೋಟ ಮಾಡಲು ಸಿದ್ಧ ಮಾಡಿದ್ದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಈ ಬೆಳವಣಿಗೆ ದೇವಾಲಯಕ್ಕೆ ಮತ್ತಷ್ಟು ತುಳಸಿ, ಹೂ ತೋಟ ಮಾಡಲು ಪ್ರೇರಣೆಯಾಗಲಿ ಎಂದು ಹಾರೈಸಿದರು.

ಪಾಂಡವಪುರ ತಹಸೀಲ್ದಾರ್ ಶ್ರೇಯಸ್, ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಮಹೇಶ್, ವಿದ್ವಾನ್ ಶ್ರೀರಂಗಂ ರಾಮಪ್ರಿಯ, ಎಸ್.ಎನ್.ಸಂತಾನರಾಮನ್, ಎಸ್.ನಾರಾಯಣಭಟ್ಟರ್, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಡಾ.ಎನ್.ಕೆ ವೆಂಕಟೇಗೌಡ, ರಾಜೇಶ್, ಸುರೇಶ್, ಜಯಕುಮಾರ್ ಮಹದೇವಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net