ನ್ಯಾಯಯುತ ಬೇಡಿಕೆ ಈಡೇರಿಸಲಿ, ಗ್ರಾಮ ಆಡಳಿತಾಧಿಕಾರಿಗಳಿಂದ ಪ್ರತಿಭಟನಾ ಮೆರವಣಿಗೆ

26sdp3a- Manavi
Published on

ಸಿದ್ದಾಪುರ: ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ನೆಹರೂ ಮೈದಾನದಲ್ಲಿ ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಕೈಗೆ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸಿದರು.


ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಮೌನ ಮುಷ್ಕರ ನಡೆಸುತ್ತಿದ್ದು, ಸ್ಥಳಕ್ಕೆ ತಹಸೀಲ್ದಾರ ಎಂ.ಆರ್. ಕುಲಕರ್ಣಿ ಭೇಟಿ ನೀಡಿ ಮುಷ್ಕರ ನಿರತ ಗ್ರಾಮ ಆಡಳಿತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.


ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಹರೀಶ ನಾಯ್ಕ ಮಾತನಾಡಿ, 21ಕ್ಕೂ ಹೆಚ್ಚು ತಂತ್ರಾಂಶಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ನಮಗೆ ಸುವ್ಯವಸ್ಥಿತ ಕಚೇರಿ, ಟೇಬಲ್, ಖರ್ಚಿ, ಅಲ್ಮೆರಾಗಳು, ಕೆಲಸ ನಿರ್ವಹಿಸಲು ಅಗತ್ಯವಾಗಿರುವ ಮೊಬೈಲ್, ಕಂಪ್ಯೂಟರ್,ಸ್ಕಾ್ಯನರ್, ಪ್ರಿಂಟರ್, ಡಾಟಾ ಪ್ಯಾಕೇಜ್ ಅನ್ನು ಸರ್ಕಾರ ಪೂರೈಸಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಬೇಕು ಎನ್ನುವ ವಿಷಯ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ ಮನವಿಯನ್ನು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರ ಮೂಲಕ ಜಿಲ್ಲಾಧಿಕಾರಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಿದರು.


ಸಂಘದ ಗೌರವಾಧ್ಯಕ್ಷ ಯೋಗೇಶ ಎಂ, ಅಧ್ಯಕ್ಷ ಕೃಷ್ಣ ಈಶ್ವರ ನಾಯ್ಕ, ಉಪಾಧ್ಯಕ್ಷ ಶೇಖರ ಕಾಲೇಕರ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಎನ್.ಆರ್, ಸಂಘಟನಾ ಕಾರ್ಯದರ್ಶಿ ಯೋಗೇಶ ಆರ್, ಖಜಾಂಚಿ ರೂಪಾ ಎಲ್., ಕಾರ್ಯದರ್ಶಿ ವಿದ್ಯಾಶ್ರೀ ಸಿ., ಹನುಮಂತಪ್ಪ ವೈ., ಪ್ರತಿಭಾ ಮರಾಠಿ ಸೇರಿ ತಾಲೂಕಿನ ಎಲ್ಲ ಗ್ರಾಮ ಆಡಳಿತಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net