ಸಾಕಾರಗೊಳ್ಳಲಿ ‘ವಿಕಸಿತ ಚಿಕ್ಕಬಳ್ಳಾಪುರ’ ಕನಸು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಪೂರ್ವ ಡಾ.ಕೆ.ಸುಧಾಕರ್ ಪ್ರಣಾಳಿಕೆ ಬಿಡುಗಡೆಗೊಳಿಸಿರುವುದು.
9CBP1
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಪೂರ್ವ ಡಾ.ಕೆ.ಸುಧಾಕರ್ ಪ್ರಣಾಳಿಕೆ ಬಿಡುಗಡೆಗೊಳಿಸಿರುವುದು.
Published on


ಕೊಟ್ಟ ಮಾತು ಉಳಿಸಿಕೊಳ್ಳುವರೇ ನೂತನ ಸಂಸದರು?- ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ನಿರೀಕ್ಷೆಯಲ್ಲಿ ಜನರು

ಚಿಕ್ಕಬಳ್ಳಾಪುರ : ಭಾರಿ ಮತಗಳ ಅಂತರದೊಂದಿಗೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವು ಸಾಧಿಸಿದ ಬಳಿಕ ಕ್ಷೇತ್ರದಾದ್ಯಂತ ಜನಪರ ಭರವಸೆಗಳ ಈಡೇರಿಕೆ, ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ನಿರೀಕ್ಷೆಯ ಮಾತುಗಳು ಕೇಳಿ ಬರುತ್ತಿವೆ.
ಕೇಂದ್ರದಲ್ಲಿ ಸ್ವಪಕ್ಷೀಯ ಸರ್ಕಾರವೇ ಆಡಳಿತದ ಚುಕ್ಕಾಣಿ ಹಿಡಿದಿದೆ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸ್ವತಃ ಅಭ್ಯರ್ಥಿಯಾಗಿದ್ದ ಡಾ.ಕೆ.ಸುಧಾಕರ್ ಜತೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪೂರ್ವ ಸಾಕಷ್ಟು ಭರವಸೆಗಳನ್ನು ನೀಡಿದ್ದರು. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಣಾಳಿಕೆಯನ್ನೂ ಬಿಡುಗಡೆಗೊಳಿಸಲಾಗಿತ್ತು. ಇದೀಗ ಸಾಕಾರಗೊಳಿಸುವ ಹೊಣೆಗಾರಿಕೆಯನ್ನು ನೂತನ ಸಂಸದರು ನಿಭಾಯಿಸಬೇಕಿದೆ.
ಚಿಕ್ಕಬಳ್ಳಾಪುರದ ಶಾಸಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುಧಾಕರ್ ದೊಡ್ಡ ಕೊಡುಗೆಗಳ ಮೂಲಕ ಗಮನ ಸೆಳೆದಿದ್ದು, ಅದರಲ್ಲೂ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮಂಜೂರು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ದೊಡ್ಡ ಸಾಧನೆ. ಈ ಭಾಗದಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗುವಲ್ಲಿ ಸಹಕಾರಿಯಾಗಿದೆ. ಇನ್ನು ಅಂತರ್ಜಲ ಮಟ್ಟ ವೃದ್ಧಿಗಾಗಿ ಎಚ್.ಎನ್.ವ್ಯಾಲಿ ಯೋಜನೆಯ ಜಾರಿಯಲ್ಲೂ ಸುಧಾಕರ್ ಪಾತ್ರ ಮಹತ್ತರವಾದುದು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಜಿಲ್ಲಾಸ್ಪತ್ರೆ, ಖಾಸಗಿ ಬಸ್ ನಿಲ್ದಾಣ ಸೇರಿ ದೊಡ್ಡ ಕಟ್ಟಡಗಳು ಅಭಿವೃದ್ಧಿಯನ್ನು ಸಾರುತ್ತವೆ. ಈಗ ಸಂಸದರಾಗಿ ನೀಡಲಿರುವ ಕೊಡುಗೆಗಳ ಬಗ್ಗೆ ಚರ್ಚೆಯಾಗುತ್ತಿದೆ.


ಈ ಭಾಗದ ಪ್ರಮುಖ ನಿರೀಕ್ಷೆಗಳು
ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಯು ಪ್ರಮುಖ ಬೇಡಿಕೆ. ಪ್ರಸ್ತುತ ಕುಡಿಯುವ ನೀರು ಪೂರೈಕೆಯ ಎತ್ತಿನಹೊಳೆ ಯೋಜನೆಯು ಆಮೆಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ವೇಗ ಸಿಗಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಯೋಜನೆಯಡಿ ಕೆಲಸ ಕೈಗೊಳ್ಳಬೇಕಿದೆ. ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಮಂಜೂರಾಗಿದ್ದು, ಆದರೆ ಕೆಲ ಬೆಳವಣಿಗೆಗಳಿಂದ ರದ್ದಾಗಿದೆ. ತ್ವರಿತವಾಗಿ ಮರು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಇಲ್ಲಿನ ಯುವ ಜನರು ಉದ್ಯೋಗಕ್ಕಾಗಿ ಬೇರೆ ಭಾಗಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸಣ್ಣ ಮತ್ತು ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ.

ಚುನಾವಣಾ ಪೂರ್ವ ಪ್ರಣಾಳಿಕೆ

  • ಬಯಲುಸೀಮೆ ಭಾಗಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲು ಶಾಶ್ವತ ನೀರಾವರಿ ಯೋಜನೆಯನ್ನು ರೂಪಿಸಲಾಗುವುದು. ಕೆಸಿ ವ್ಯಾಲಿ, ಎಚ್‌ಎನ್ ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸಿ ಪೂರೈಸುವುದು. ಬಾಗೇಪಲ್ಲಿ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಕ್ಕೂ ನೀರಾವರಿ ಸೌಲಭ್ಯ ಕಲ್ಪಿಸುವುದು.
  • ರಾಜ್ಯದಲ್ಲಿನ ಪ್ರತ್ಯೇಕ ಕಾಫಿ ಬೋರ್ಡ್ ಮಾದರಿಯಲ್ಲಿ 15 ಸಾವಿರ ಎಕರೆಯಲ್ಲಿ ಬೆಳೆಯುತ್ತಿರುವ ಹೂವಿನ ಕೃಷಿಗಾಗಿ ಪುಷ್ಪ ಮಂಡಳಿ ಸ್ಥಾಪನೆ.
  • ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚು ಕಾರ್ಮಿಕರಿರುವ ಸ್ಥಳದಲ್ಲಿ ಇಎಸ್‌ಐ ಆಸ್ಪತ್ರೆ ಆರಂಭಿಸುವ ಗುರಿ.
  • ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ನಂದಿ ಮೆಡಿಕಲ್ ಕಾಲೇಜು ನಿರ್ಮಾಣವಾಗಿದ್ದು, ಸಮಗ್ರ ಆರೋಗ್ಯ ಸಿಟಿಯಾಗಿ ಅಭಿವೃದ್ಧಿ. ಹೃದ್ರೋಗ ವಿಭಾಗ, ನರರೋಗ ವಿಭಾಗ, ನೆಫ್ರೋ ಯುರಾಲಜಿ ಸೇರಿ ಹಲವು ವಿಭಾಗಗಳನ್ನು ಆರಂಭಿಸುವುದು.
  • ಭಾರತರತ್ನ ಸರ್.ಎಂ.ವಿಶ್ವೇಶರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪನೆ. ಬೆಂ.ಗ್ರಾಮಾಂತರ ಜಿಲ್ಲೆಗೆ ವೈದ್ಯಕೀಯ ಕಾಲೇಜ್ ಮಂಜೂರು.
  • ಬೆಂಗಳೂರು ನಗರದ ಮೇಲಿನ ಒತ್ತಡವನ್ನು ತಗ್ಗಿಸಲು ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಚಿಕ್ಕಬಳ್ಳಾಪುರವನ್ನು ಉಪನಗರಗಳಾಗಿ ಅಭಿವೃದ್ಧಿಪಡಿಸುವುದು.
  • ವರ್ತುಲ ರೈಲ್ವೆ ಜಾಲ ವಿಸ್ತರಣೆ. ಅದಕ್ಕಾಗಿ 10-12 ಹೊಸ ರೈಲುಗಳ ಸಂಚಾರಕ್ಕೆ ಕ್ರಮ.
  • ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಮತ್ತು ದೊಡ್ಡಬಳ್ಳಾಪುರ, ನೆಲಮಂಗಲ ಮೊದಲಾದ ಕಡೆ ವಿಸ್ತರಣೆ.
  • ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ 20-30 ಸಾವಿರ ಮಹಿಳಾ ಸಂಘಗಳನ್ನು ರಚಿಸಿ, ಮುದ್ರಾ ಯೋಜನೆಯಡಿ ಸವಲತ್ತುಗಳನ್ನು ಕಲ್ಪಿಸುವುದು.
  • ಕ್ಷೇತ್ರದಲ್ಲಿ ಬಡವರಿಗೆ ಕನಿಷ್ಠ 50 ಸಾವಿರ ಮನೆಗಳ ನಿರ್ಮಾಣ.
  • ಸಣ್ಣ ಫಾರ್ಮಾ ಪಾರ್ಕ್ ನಿರ್ಮಾಣ. ಕೇಂದ್ರದ ಅನುದಾನದಡಿ ಮುದ್ದೇನಹಳ್ಳಿ, ಸುಲ್ತಾನ್‌ಪೇಟೆ, ಈಶ ಫೌಂಡೇಶನ್ ಸೇರಿ ಟೂರಿಸಂ ಕಾರಿಡಾರ್ ನಿರ್ಮಾಣ.
  • ಬೆಂ.ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಾಣ.
  • ಬಾಗೇಪಲ್ಲಿ ಇಲ್ಲವೇ ಗೌರಿಬಿದನೂರಿನಲ್ಲಿ ಸೌರ ವಿದ್ಯುತ್ ಪಾರ್ಕ್ ನಿರ್ಮಿಸುವ ಗುರಿ ಹೊಂದಲಾಗಿದೆ.


ವಿಕಸಿತ ಚಿಕ್ಕಬಳ್ಳಾಪುರ ನಿರ್ಮಾಣದ ಕನಸಿನ ನನಸಿನ ಗುರಿಯನ್ನು ಹೊಂದಿದ್ದು, ಕ್ಷೇತ್ರದ ಎಲ್ಲರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂಬರುವ ಐದು ವರ್ಷ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುವೆ.
- ಡಾ.ಕೆ.ಸುಧಾಕರ್, ನೂತನ ಸಂಸದ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ


ನೂತನ ಸಂಸದ ಡಾ.ಕೆ.ಸುಧಾಕರ್ ಈ ಭಾಗದ ಜನರ ಧ್ವನಿಯಾಗಿ ಕೆಲಸ ಮಾಡಲಿ. ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಈಡೇರಿಸಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು.
- ರಕ್ಷಾ ರಾಮಯ್ಯ, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net