

ಮೇಲುಕೋಟೆ: ಮೇಲುಕೋಟೆ ಚೆಲುವನಾರಾಯಣನ ಸನ್ನಿಧಿಯಲ್ಲಿ ನವರಾತ್ರಿ ಸೇರಿದಂತೆ ಎಲ್ಲ ಮಹೋತ್ಸವಗಳ ಸಂದರ್ಭದಲ್ಲ್ಲೂ ಭಾರತೀಯ ಸಾಂಸ್ಕೃತಿಕ ಕಲೆಗಳಿಗೆ ವೇದಿಕೆ ದೊರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಇಂಗಿತ ವ್ಯಕ್ತಪಡಿಸಿದರು.
ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಸ್ಥಾನ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ನವರಾತ್ರಿ ಸಂಗೀತ-ನೃತ್ಯೋತ್ಸವ ಸೇವೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನವರಾತ್ರಿ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚೆಲುವನಾರಾಯಣನ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಅವಕಾಶ ಮಾಡಿಕೊಟ್ಟಿರುವುದು ಅಭಿನಂದನೀಯವಾದುದು. ಪ್ರತಿ ವರ್ಷ ತಪ್ಪದೆ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಪರಂಪರೆ ಮುಂದುವರಿಯಬೇಕು. ದೇವಾಲಯಗಳು ಭಾರತದ ಸಂಸ್ಕೃತಿಯನ್ನು ಪೋಷಿಸುವ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯದ ಆಡಳಿತ ರೂಪುರೇಷೆ ಸಿದ್ಧಮಾಡಿಕೊಂಡು ಕ್ರಮ ವಹಿಸಬೇಕು. ಇದರಿಂದ ಭಾರತದ ಶ್ರೀಮಂತ ಪರಂಪರೆ ಮುಂದುವರಿಯಲು ಸಹಕಾರಿಯಾಗುತ್ತದೆ ಎಂದರು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು ಮಾತನಾಡಿ, ಮೇಲುಕೋಟೆಯ ನವರಾತ್ರಿ ಉತ್ಸವ ನಿರ್ವಹಣೆಗಾಗಿಯೇ ವಿಶೇಷ ಬಜೆಟ್ ತಯಾರಿಸಲಾಗುತ್ತದೆ. ಮುಂದಿನ ವರ್ಷದಿಂದ ಮೈಸೂರು ಅರಸರ ಕುಲದೈವ ಶ್ರೀ ಚೆಲುವನಾರಾಯಣನ ಕ್ಷೇತ್ರವಾದ ಮೇಲುಕೋಟೆ ನವರಾತ್ರಿ-ವಿಜಯದಶಮಿಗೂ ಆದ್ಯತೆ ನೀಡಿ ಜಿಲ್ಲಾಡಳಿತದ ವತಿಯಿಂದ ಒಂಬತ್ತೂ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಸಾಂಸ್ಕೃತಿಕ ಪ್ರಜ್ಞೆ ರೂಡಿಸಬೇಕಾದ ಅಗತ್ಯ ಇದೆ ಎಂದರು.
ಭಕ್ತಿ ಸಿಂಚನ: ನವರಾತ್ರಿ ಸಂಗೀತ ನೃತ್ಯೋತ್ಸವ ಸೇವೆಯಡಿ ನಾಲ್ಕನೇ ದಿನವಾದ ಸೋಮವಾರ ರಾತ್ರಿ ಆಯೋಜಿಸಿದ್ದ ಭಕ್ತಿಸಿಂಚನ ಕಾರ್ಯಕ್ರಮದಲ್ಲಿ ಬೇವಿನಕುಪ್ಪೇ ನಾಗಲಿಂಗೇಗೌಡ ತಂಡ ಪ್ರಸ್ತುತಪಡಿಸಿದ ಭಕ್ತಿಗೀತೆ, ಭಾವಗೀತೆ, ಜನಪದಗೀತೆಗಳು ಕೇಳುಗರ ಮನಸೂರೆಗೊಂಡಿತು.
ಇದೇ ವೇಳೆ ರಂಗೋಲಿ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇನ್‌ಫೋಸಿಸ್ ಹಿರಿಯ ವ್ಯವಸ್ಥಾಪಕಿ ಡಾ.ಪ್ರೀತಿ ಮಹದೇವು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್ ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ, ಸಾಮಾಜಿಕ ಹೋರಾಟಗಾರ ಈಶಮುರಳಿ, ಕೆ.ಎನ್ ಸುಬ್ರಮಣ್ಯ, ಸಂತಾನರಾಮನ್ ಭಾಗವಹಿಸಿದ್ದರು.