ಟೀಕಿಸುವವರು ಕನ್ನಡವನ್ನು ನನ್ನಷ್ಟು ಪ್ರೀತಿಸಲಿ

ಟೀಕಿಸುವವರು ಕನ್ನಡವನ್ನು ನನ್ನಷ್ಟು ಪ್ರೀತಿಸಲಿ
Published on

ಹಾಸನ: ಕನ್ನಡದ ಜತೆಗಿನ ನನ್ನ ನಂಟನ್ನು ಸಂದೇಹಾಸ್ಪದವಾಗಿ ಬಿಂಬಿಸಿ ಮುಂಚೂಣಿಗೆ ತರುತ್ತಿರುವವರು ಕನ್ನಡವನ್ನು ನನ್ನಷ್ಟು ಪ್ರೀತಿಸಿ ಬಳಕೆ ಮಾಡಲಿ ಎಂದು ಬಾನು ಮುಷ್ತಾಕ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡವನ್ನು ನಾನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನವರ ಬಾಯಲ್ಲಿ ಕನ್ನಡ ಎಂದು ಹೇಳಿಸುತ್ತಿದ್ದೇನೆ. ಅಲ್ಲಿ ಹೋಗಿ ಕನ್ನಡದ ಒಂದೊಂದು ಪುಟ ಓದುತ್ತಿದ್ದೇನೆ. ಟೀಕಿಸುವವರು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ. ಟೀಕಿಸುವವರು ಇಷ್ಟು ಸಾಧನೆ ಮಾಡಿದಾಗ ನನ್ನ ಮೇಲೆ ಕೆಸರೆರಚಲು ಅರ್ಹತೆ ಸಿಗುತ್ತದೆ ಎಂದರು.

ನಂಬಿದವರನ್ನು ಕನ್ನಡ ಯಾವತ್ತೂ ಕೈ ಬಿಟ್ಟಿಲ್ಲ. ಇದಕ್ಕೆ ನಾನೇ ಸಾಕ್ಷಿ. ಕೋಟ್ಯಂತರ ಕನ್ನಡಿಗರು ಅಷ್ಟೊಂದು ಪ್ರೀತಿ, ಅಭಿಮಾನ ಕೊಡುತ್ತಿದ್ದು, ಟೀಕಿಸುವವರಿಗೆ ಪ್ರತಿಕ್ರಿಯೆಯನ್ನು ಜನರೇ ಕೊಡುತ್ತಾರೆ. ವಿರೋಧ ಪಕ್ಷ- ಆಡಳಿತ ಪಕ್ಷ ಇರಬೇಕು. ರಾಜಕೀಯ ಮಾಡಬೇಕು. ಆದರೆ ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕು, ಯಾವುದರಲ್ಲಿ ಮಾಡಬಾರದು ಎನ್ನುವ ಪ್ರಜ್ಞೆ ಸಕ್ರಿಯ ರಾಜಕಾರಣಿಗಳಿಗೆ ಇರಬೇಕಾಗುತ್ತದೆ. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಂತಹವರ ಸಂತತಿ ಬಿಜೆಪಿಯಲ್ಲಿ ಹೆಚ್ಚಾಗಲಿ ಎಂಬುದಾಗಿ ಅಪೇಕ್ಷೆ ಪಡುತ್ತೇನೆ ಎಂದರು.

ಒಂದು ಸಮತೋಲನದಿಂದ ವಿಷಯ ಅನ್ವೇಷಣೆ ಮಾಡಿ ಆ ಬಗ್ಗೆ ದ್ವಂದ್ವ ಇಲ್ಲದೆ ಹೇಳಿಕೆ ನೀಡಬೇಕು. ಇದು ವಿದ್ಯಾವಂತ, ಸುಸಂಸ್ಕೃತ ಮನಸ್ಸುಗಳಿಂದ ಮಾತ್ರ ಸಾಧ್ಯ. ಬುಕರ್‌ರಂತಹ ಪ್ರಶಸ್ತಿ ಸಿಗೋದು ಸುಲಭದ ಮಾತಲ್ಲ. ಅದರ ಬಗ್ಗೆ ಒಂದಿಬ್ಬರು ಬಹಳ ಕೇವಲವಾಗಿ ಮಾತನಾಡುತ್ತಾರೆ. ಅದರ ಬಗ್ಗೆ ನನಗೆ ಬೇಜಾರಿಲ್ಲ ಮಾತಾಡಲಿ. ಅವರವರ ಮಟ್ಟಕ್ಕೆ ಮಾತನಾಡ್ತಾರೆ ಎಂದು ಟೀಕಿಸಿದರು.

2023ರಲ್ಲಿ ನಡೆದ ಜನ ಸಾಹಿತ್ಯ ಸಮ್ಮೇಳನದದಲ್ಲಿ ನಾನು ಆಡಿದ ಮಾತಿನ ತುಣುಕು ಹಾಕಿ ನನ್ನ ವಿರುದ್ಧ ಕೆಲವರು ಈಗ ಆರೋಪ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ, ಸಂಸ್ಕೃತಿ ಬಗ್ಗೆ ನೇರವಾಗಿ ಮಾತಾಡಿದ್ದೇನೆ. ಅದರಲ್ಲಿ ಹೇಳಿರುವ ವಿಚಾರ ಎಲ್ಲರಿಗೂ ಅರ್ಥ ಆಗಿದೆ ಎಂದು ಸಮರ್ಥಿಸಿಕೊಂಡರು.

ಕನ್ನಡವನ್ನು ಭಾಷೆಯಾಗಿ ಬಳಸುವ ಬದಲಾಗಿ ಭಾವುಕವಾಗಿ ಪರಿಗಣಿಸಲಾಗಿದೆ. ಈ ರೀತಿ ಭಾಷೆಯನ್ನು ಪ್ರಶ್ನೆ ಮಾಡಬಾರದು. ಬದಲಾಗಿ ಅದನ್ನು ನಮ್ಮ ಭಾಷೆಯನ್ನಾಗಿ ಬಳಸಬೇಕು ಎಂದರು.

ಹಾವೇರಿ ಸಮ್ಮೇಳನದಿಂದ ದೂರ ಇಟ್ಟಿರುವ ಅನೇಕ ಅಲ್ಪಸಂಖ್ಯಾತರನ್ನು ಎಲ್ಲಿ ನಿಲ್ಲಿಸಬೇಕು ಎನ್ನುವ ಅರ್ಥದಲ್ಲಿ ದೂರ ನಿಲ್ಲಬೇಡಿ. ಹತ್ತಿರ ನಿಲ್ಲಿ ಎಂದು ಆತ್ಮವಿಶ್ವಾಸದ ಸಂಕೇತವಾಗಿ ಹೇಳಿದ್ದೀನಿ. ನಾನು ಹೇಳಿದ ಮಾತು ತಿರುಚುವ ಅಗತ್ಯವಿಲ್ಲ. ಮಾತನ್ನು ಸಹೃದಯದಿಂದ ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net