ಜಿಲ್ಲಾಧಿಕಾರಿ ನಿಷೇದಾಜ್ಞೆ ಹಿಂಪಡೆಯಲಿ

FotoJet
Published on

ಪ್ರತಿಭಟನೆಗೆ ಡಿಸಿ ಕಚೇರಿ ಆವರಣದಲ್ಲೇ ಅವಕಾಶ ನೀಡಬೇಕು | ರಾಜ್ಯ ರೈತ ಸಂಘದಿಂದ ಆಕ್ರೋಶ

ರಾಮನಗರ : ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗೆ ನಿಷೇಧ ಏರಿರುವ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರಾಮನಗರ ಐಜೂರು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ ಶನಿವಾರ ಪ್ರತಿಭಟಿಸಿದರು.
ಪ್ರತಿಭಟನೆಗೂ ಮುನ್ನ ರಾಮನಗರದ ಎಪಿಎಂಸಿ ಆವರಣದಿಂದ ಬಂದ ರೈತ ಸಂಘದ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಸೇರಿ ಜಿಲ್ಲಾಧಿಕಾರಿಗಳು ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿ, ಡಿಸಿ ವಿರುದ್ಧ ಘೋಷಣೆ ಕೂಗಿ ಏಕವಚನದ ಪದ ಬಳಸಿ ಮುಖಂಡರು ಆಕ್ರೋಶ ಹೊರಹಾಕಿದರು. ಮಹಿಳಾ ಕಾರ್ಯಕರ್ತೆಯರು ಆಕ್ರೋಶವಾಗಿಯೇ ಮಾತನಾಡಿದರು.
ವಿಭಾಗೀಯ ರೈತ ಸಂಘದ ಕಾರ್ಯದರ್ಶಿ ಕೆ. ಮಲ್ಲಯ್ಯ ಮಾತನಾಡಿ, ಜಿಲ್ಲಾಧಿಕಾರಿ ಏಕ ನಡೆ ಮೂಲಕ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಾನೂನು ಬದ್ಧ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಿದ್ದಾರೆ. ನಮ್ಮ ಹಕ್ಕನ್ನು ಹೇಗೆ ಪಡೆಯುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ತಮ್ಮ ಕುಂದುಕೊರತೆಯನ್ನು ಜಿಲ್ಲಾಡಳಿತಕ್ಕೆ ಪ್ರತಿಭಟನೆ ಮೂಲಕ ತಿಳಿಸಬೇಡಿ ಎನ್ನುತ್ತಿರುವುದು ಸರಿಯಲ್ಲ. ಕಚೇರಿಗೆ ಸಮಸ್ಯೆ ಹೇಳಿಕೊಳ್ಳಲು ಬರಲೇ ಬೇಡಿ ಎಂದು ನಿಷೇಧಾಜ್ಞೆ ವಿಧಿಸಿ ನಾನೇ ಶ್ರೇಷ್ಠ ಎಂದು ನಡೆದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ ಎಂದರು.
ಸರ್ಕಾರ ಇಂತಹ ಜಿಲ್ಲಾಧಿಕಾರಿಯನ್ನು ರಾಮನಗರ ಜಿಲ್ಲೆಗೆ ಹಾಕಿ ವ್ಯವಸ್ಥೆಯ ಮೇಲೆ ಅಪನಂಬಿಕೆ ಬರುವಂತೆ ಮಾಡಿದ್ದಾರೆ. ಕೂಡಲೇ ಇವರನ್ನು ವಾಪಸ್ ಕರೆಸಿಕೊಂಡು ಬೇರೆ ಜಿಲ್ಲಾಧಿಕಾರಿಯನ್ನು ನೇಮಕ ಮಾಡಬೇಕು. ಪ್ರತಿಭಟನೆಗೆ ಡಿಸಿ ಕಚೇರಿ ಆವರಣದಲ್ಲೇ ಅವಕಾಶ ನೀಡಬೇಕು. 144 ನಿಷೇದಾಜ್ಞೆ ತೆರವು ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ರೈತ ಸಂಘಟನೆಗಳು ಬೀದಿಗಿಳಿಯಲಿವೆ. ಜಿಲ್ಲೆಯಲ್ಲೂ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.
ರೈತ ಸಂಘದ ಮುಖಂಡ ಚೀಲೂರು ಮುನಿರಾಜು ಮಾತನಾಡಿ, ಕಳೆದ ತಿಂಗಳಿಂದಲೂ ಹೋರಾಟದ ಮೂಲಕ ಎಚ್ಚರಿಸುತ್ತಿದ್ದರೂ ಇದಕ್ಕೂ ನನಗೂ ಏನೂ ಸಂಬಂದವೇ ಇಲ್ಲದಂತೆ ಜಿಲ್ಲಾಧಿಕಾರಿ ವರ್ತನೆ ಆಗಿದೆ. ಈಗಾಗಲೇ ಉಸ್ತುವಾರಿ ಸಚಿವರು, ಡಿಸಿಎಂ ಗಮನಕ್ಕೂ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಕಿಡಿ ಕಾರಿದರು.

ಬಂದೋಬಸ್ತ್
ನಗರ, ಐಜೂರು, ಗ್ರಾಮಾಂತರ ಪೋಲೀಸರು ಪ್ರತಿಭಟನೆಗೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಮಹಿಳಾ ಪೋಲೀಸರು ಸೇರಿ ನೂರಾರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.
ರೈತ ಮುಖಂಡರಾದ ಹೊಸದುರ್ಗ ಪ್ರಶಾಂತ್, ಮಾಗಡಿ ಲೋಕೇಶ್, ಪುಟ್ಟಸ್ವಾಮಿ, ಶಿವಲಿಂಗಯ್ಯ, ನಾಗರಾಜು, ಶಿಲ್ಪಾ, ಬುಡನ್ ಸಾಬ್, ಶಿವಣ್ಣ, ನಾಗರಾಜು, ಕೃಷ್ಣಯ್ಯ ಮುಂತಾದವರಿದ್ದರು.

ಜಿಲ್ಲೆಯಲ್ಲಿ ರೈತರಿಗೆ ಸಾಕಷ್ಟು ಸಮಸ್ಯೆಗಳಿದ್ದು, ಸಮಸ್ಯೆ ಹೇಳಿಕೊಳ್ಳಲು ಬರದಂತೆ ತಡೆಯುವುದು ಜಿಲ್ಲಾಧಿಕಾರಿ ಉದ್ದೇಶವಾಗಿದೆ. ಜಿಲ್ಲಾಡಳಿತ ಸಮಸ್ಯೆಗಳನ್ನು ಪರಿಹರಿಸಿದರೆ ಜನತೆ ಯಾಕೆ ಬಂದು ಪ್ರತಿಭಟನೆ ನಡೆಸುತ್ತಾರೆ. ಸಮಸ್ಯೆ ಇರುವುದಕ್ಕೆ ತಾನೆ ಜನರು ಪ್ರತಿಭಟನೆಯ ಹಾದಿ ತುಳಿಯುವುದು. ಎಲ್ಲೋ ಒಂದು ಜಾಗದಲ್ಲಿ ಪ್ರತಿಭಟನೆ ನಡೆಸಿ ಎಂದರೆ ಹೇಗೆ.. ಕೂಡಲೇ ಜಿಲ್ಲಾಧಿಕಾರಿ ನಿಷೇಧ ವಾಪಸ್ ಪಡೆದು ಜನಸಾಮಾನ್ಯರ ಕಷ್ಟ ಕೇಳಬೇಕು, ಇಲ್ಲ ರಾಮನಗರ ಬಿಟ್ಟು ಹೊಗಬೇಕು.- ತಿಮ್ಮೇಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ

ಜಿಲ್ಲಾಧಿಕಾರಿಗಳು ಹೋರಾಟಗಾರರ ತಾಳ್ಮೆ ಪರೀಕ್ಷೆ ನಡೆಸುತ್ತಿದ್ದಾರೆ. ರೈತರು ಸಿಡಿದೆದ್ಡರೆ ಮುಂದೆ ಪ್ರತಿಭಟನೆಗಳು ನಾನಾ ರೂಪ ತಿರುಗುತ್ತವೆ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ರೈತರು ಸಮಸ್ಯೆ ಹೇಳಲು ಅವಕಾಶ ನೀಡಬೇಕು. ಕಾನೂನು ಅಸ್ತ್ರ ಬಳಸಿ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಜಿಲ್ಲಾಧಿಕಾರಿ ಜನ ಸೇವಕರು ಜನ ಸೇವೆ ನಿಮ್ಮ ದ್ಯೇಯವಾಗಲಿ ಜನ ಸೇವೆ ನಿಮ್ಮಿಂದ ಆಗದಿದ್ದರೆ ವರ್ಗಾವಣೆ ತೆಗೆದುಕೊಂಡು ಹೋಗಿ, ಇಲ್ಲದಿದ್ದರೆ ಮುಂದೆ ಉಗ್ರರೂಪದಲ್ಲಿ ರಾಜ್ಯಾದ್ಯಂತ ಚಳವಳಿ ಮುಖಾಂತರ ಹೋರಾಟ ಪ್ರಾರಂಭವಾಗುತ್ತವೆ ಎಚ್ಚರವಿರಲಿ.- ರಮ್ಯಾ, ಮಹಿಳಾ ರೈತ ಮುಖಂಡರು.

ಟ್ರಾಫಿಕ್ ಜಾಮ್
ದಸರಾ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ರಸ್ತೆಯಲ್ಲಿ ಎರಡೂ ಕಡೆ ವಾಹನಗಳು ಗಿಜಿಗಿಡುತ್ತಿದ್ದವು. ರಸ್ತೆ ಮಧ್ಯೆದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿದ ಕಾರಣ ಎರಡೂ ಕಡೆ ವಾಹನಗಳು ನಿಂತವು. ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ಬಿಸಿ ವಾಹನಸವಾರರಿಗೆ ತಟ್ಟಿತು.

ಒನ್‌ವೇನಲ್ಲಿ ವಾಹನ ಚಲಾವಣೆ
ಬಸ್ ನಿಲ್ದಾಣದ ಕಡೆಯಿಂದ ಬೆಂಗಳೂರು ಕಡೆಯಿಂದ ಬಂದ ವಾಹನಗಳನ್ನು ಪೋಲೀಸರು ಒನ್ ವೇ ಮೂಲಕ ಕಳಿಸಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮುಂದಾದರು. ನಂತರ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಮಧ್ಯ ರಸ್ತೆಯಲ್ಲಿ ಮಾಡುವಂತೆ ತಿಳಿಸಿ ಎರಡೂ ಕಡೆ ರಸ್ತೆ ಜಾಗ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿದರು.

ಮಾತಿನ ಚಕಮಕಿ
ಇದೇ ವೇಳೆ ವಾಹನ ಸವಾರರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸುತ್ತಿದ್ದ ಸಮಯದಲ್ಲಿ ವಾಹನಗಳು ಮುಂದೆ ಬರಲು ಮುಂದಾದಾಗ ರೈತರು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ, ಏಕೆ ಹೀಗೆ ನುಗ್ಗುತ್ತಿದ್ದೀರಿ ನಿಮಗೆ ಕಣ್ಣು ಕಾಣುವುದಿಲ್ಲವೇ ಎಂದು ದ್ವಿಚಕ್ರ ವಾಹನ ಸವಾರನ ಮೇಲೆ ಹರಿಯಾಯ್ದರು. ಸೂಕ್ಷ್ಮತೆ ಅರಿತ ಪೋಲೀಸರು ಕೂಡಲೇ ವಾಹನಗಳನ್ನು ನಿಲ್ಲಿಸಿ ಬಸ್ ನಿಲ್ದಾಣದ ಮೂಲಕ ಕಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net