ಚನ್ನರಾಯಪಟ್ಟಣ: ನೀರು ಸಲಹಾ ಸಮಿತಿ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಕರ್ನಾಟಕ ಹಾಗೂ ತಮಿಳುನಾಡು ನಡುವೆ ಮಧ್ಯಸ್ಥಿಕೆ ವಹಿಸಿ ನೀರಿನ ಲಭ್ಯತೆಗೆ ಅನುಗುಣವಾಗಿ ಆದೇಶ ನೀಡಲಿ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎಲ್.ರಘು ಮಾತನಾಡಿ, ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಕಾಡಲಿದೆ. ರೈತರಿಗೆ ಭತ್ತ ಬೆಳೆಯದಂತೆ ಸೂಚಿಸುವ ಸರ್ಕಾರ, ಕಬ್ಬು ಬೆಳೆದ ರೈತರ ಸ್ಥಿತಿಯನ್ನು ಮಾತ್ರ ಯೋಚಿಸುತ್ತಿಲ್ಲ. ಬರದಿಂದ ತತ್ತರಿಸಿರುವ ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಎಂ.ಎಲ್.ಹರೀಶ್ ಮಾತನಾಡಿ, ಪ್ರಗತಿಪರ ಸಂಘಟನೆಗಳು ಮತ್ತು ರೈತ ಸಂಘದ ಪದಾಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದರ ಜತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆ ಬಂದಾಗ ಹೋರಾಟಕ್ಕೆ ಮುಂದಾಗುವ ಬದಲು ಜೂನ್ ಮತ್ತು ಜುಲೈನಲ್ಲಿ ಹವಾಮಾನ ಇಲಾಖೆಯಿಂದ ಮಳೆ ಪ್ರಮಾಣದ ಮಾಹಿತಿ ಪಡೆದು ಕೊರತೆ ಉಂಟಾದಲ್ಲಿ ಸಂಘಟನೆಗಳೇ ಸೇರಿ ವಕೀಲರನ್ನು ನೇಮಿಸಿ ಕಾವೇರಿ ವಿಚಾರವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸಕ್ಕೆ ಮುಂದಾಗಬೇಕು ಎಂದರು.
ತಾಲೂಕು ಅಧ್ಯಕ್ಷ ಎಸ್.ಎಸ್.ರಾಮಚಂದ್ರ, ಮುಖಂಡರಾದ ಸೋಮೇಗೌಡ, ಎ.ಟಿ.ಮಂಜೇಗೌಡ, ಯೋಗೀಶ್, ಶಶಿಕಲಾ ಸುದ್ದಿಗೋಷ್ಠಿಯಲ್ಲಿದ್ದರು.