

ಪಾಂಡವಪುರ: ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವರ್ತನೆ ಬದಲಾಯಿಸಿಕೊಳ್ಳದಿದ್ದರೆ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಧಾಟಿಯಲ್ಲಿ ಬುದ್ಧಿ ಹೇಳಬೇಕಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳ ವಿರುದ್ಧ ಗುಡುಗಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮದಿನಾಚರಣೆ ಹಾಗೂ ಕಾಟೇರ ಚಿತ್ರದ ನಾಯಕ ನಟ ದರ್ಶನ್ ಅವರಿಗೆ ಜ.26ರಂದು ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಅಭಿನಂದನೆ ಸಮಾರಂಭ ಆಯೋಜಿಸುವ ಸಂಬಂಧ ಬುಧವಾರ ಕರೆಯಲಾಗಿದ್ದ ರೈತಸಂಘ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಾನು ಕೂಡ ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರಂತೆ ಖಡಕ್ಕಾಗಿ ನಡೆದುಕೊಳ್ಳಬೇಕು ಎಂಬುದು ರೈತಸಂಘ ಕಾರ್ಯಕರ್ತರ ಆಸೆಯಾಗಿದೆ. ಅಧಿಕಾರಿಗಳು ಬದಲಾಗುತ್ತಾರೆ ಎಂಬ ಉದ್ದೇಶದಿಂದ ಈವರೆಗೆ ತಾಳ್ಮೆಯಿಂದ ವರ್ತಿಸಿದರೂ ಪರಿಸ್ಥಿತಿ ಬದಲಾಗಿಲ್ಲ. ಅಧಿಕಾರಿಗಳು ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎಂಬುದು ಅರಿವಿಗೆ ಬಂದಿದ್ದು, ಭ್ರಷ್ಟ ವ್ಯವಸ್ಥೆಯನ್ನು ತಂದೆ ಅವರ ಧಾಟಿಯಲ್ಲೇ ಸರಿ ಮಾಡುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಕಾರ್ಯಕರ್ತರ ಪರಿಶ್ರಮದಿಂದ ಶಾಸಕನಾಗಿ ಆಯ್ಕೆಯಾಗಿ ಇಲ್ಲಿ ನಿಂತಿದ್ದೇನೆ. ರೈತ ಚಳವಳಿ ಮತ್ತು ಕ್ಷೇತ್ರದ ಅಭಿವೃದ್ಧಿ ಎರಡು ವಿಚಾರಗಳು ನನ್ನ ಮುಂದಿರುವ ಸವಾಲುಗಳು. ಸಾಮಾನ್ಯವಾಗಿ ಸಮಸ್ಯೆ ಎದುರಾದ ಮೇಲೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತೇವೆ. ನಾನು ಸಮಸ್ಯೆ ಎದುರಾಗುವ ಮುನ್ನವೇ ಅದಕ್ಕೆ ಪರಿಹಾರ ಕಂಡು ಹಿಡಿಯಲು ಶ್ರಮಿಸುತ್ತಿದ್ದೇನೆ. ಮುಂದಿನ ವರ್ಷವೂ ಬರ ಪರಿಸ್ಥಿತಿ ಉಂಟಾಗುತ್ತದೆ. ಅದಕ್ಕೆ ಈಗಿನಿಂದಲೇ ಪರಿಹಾರ ಸಿದ್ಧಪಡಿಸುತ್ತಿದ್ದು, ಅದಕ್ಕೆ ತಕ್ಕಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಡನೆ ಪ್ರತಿ ಬುಧವಾರ ಸಂವಾದ ನಡೆಯುತ್ತಿದೆ. ವಾರದಲ್ಲಿ ಒಂದು ದಿನ 5 ಸಾವಿರ ರೈತರಿಗೆ ಆನ್‌ಲೈನ್ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ, ಶಿಕ್ಷಣ, ಉದ್ಯೋಗ ಈ ಮೂರು ವಿಚಾರಗಳಿಗೆ ಆದ್ಯತೆ ನೀಡಲಾಗಿದೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ 1 ರಿಂದ 10 ತರಗತಿಯವರೆಗೆ ಶಾಲೆ ತೆರೆಯಲು ಹಾಗೂ ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಿ ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗ ನೀಡಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಪ್ರತಿ ಪಂಚಾಯಿತಿಯಲ್ಲಿ ಎರಡು ವಾರಗಳ ಕಾಲ ಕಂದಾಯ ಇಲಾಖೆ ಅಧಿಕಾರಿಗಳು ವಾಸ್ತವ್ಯ ಹೂಡಿ ರೈತರ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಜತೆ ಚರ್ಚೆ ನಡೆಸಲಾಗಿದೆ ಎಂದರು.
ಕಾರ್ಯಕರ್ತರ ಆಕ್ರೋಶ: ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು, ತಾಲೂಕು ಆಡಳಿತ ನಿಷ್ಕ್ರಿಯಗೊಂಡಂತೆ ಭಾಸವಾಗುತ್ತಿದೆ. ಅಧಿಕಾರಿಗಳು ಆಡಳಿತಾತ್ಮಕವಾಗಿ ಕೆಲ ತಾಂತ್ರಿಕ ಕಾರಣಗಳನ್ನು ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಮಾಜಿ ಶಾಸಕರ ಕೈವಾಡವಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಕಾರ್ಯದರ್ಶಿ ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಇಂಜಿನಿಯರ್ ಯೋಗೇಶ್, ಚಿಕ್ಕಮರಳಿ ಬೋರೇಗೌಡ, ಲಕ್ಷ್ಮೇಗೌಡ ಇತರರು ಇದ್ದರು.