

ಕೊಳ್ಳೇಗಾಲ: ಛಾಯಾಗ್ರಾಹಕ ವೃತ್ತಿ ಶ್ರೇಷ್ಠವಾದದ್ದು ಎಂದು ನಗರಸಭಾಧ್ಯಕ್ಷೆ ರೇಖಾ ಬಣ್ಣಿಸಿದರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ 186 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಛಾಯಾಗ್ರಾಹಕರು ಫೋಟೋ ತೆಗೆಯುವ ಮೂಲಕ ಹಿಂದಿನ ನಮ್ಮ ಮೇಮೋರಿಯನ್ನು ನೆನಪಿಸುತ್ತಾರೆ ಎಂದರು.
ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್.ಸಿದ್ದಲಿಂಗಮೂರ್ತಿ ಮಾತನಾಡಿ, 1960ರ ಸಹಕಾರ ಕಾಯ್ದೆಗಳ ಪ್ರಕಾರ ಕೊಳ್ಳೇಗಾಲ ಛಾಯಾಚಿತ್ರಗ್ರಾಹಕರ ಸಂಘ ನೋಂದಣಿಯಾಗಿದೆಯಾದರೂ ಸಂಘ ಆರ್ಥಿಕ ಅಭಿವೃದ್ಧಿ ಮತ್ತು ಸಂಘಟನೆಯಲ್ಲಿ ಸಫಲತೆ ಕಂಡಿಲ್ಲ. ಸಂಘವನ್ನು ಬೈಲಾ ಪ್ರಕಾರ ನಡೆಸಬೇಕು. ಪ್ರತಿ ಮೂರು ವರ್ಷಗಳಿಗೊಮ್ಮೆ ನವೀಕರಣ ಮಾಡಿಸಿಕೊಳ್ಳಬೇಕು. ಸರ್ವ ಸದಸ್ಯರ ಅಭಿವೃದ್ಧಿಗಾಗಿ ಸಂಘವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಕಾರ್ಮಿಕ ನಿರೀಕ್ಷಕ ಡಿ.ಎಲ್.ಪ್ರಸಾದ್, ಡಾ ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದಮೂರ್ತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ಛಾಯಾಚಿತ್ರಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಮಂಜೇಶ್, ಯಳಂದೂರು ತಾಲೂಕು ಅಧ್ಯಕ್ಷ ಕೃಷ್ಣ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ನಾಗೇಂದ್ರ, ಹನೂರು ತಾಲೂಕು ಅಧ್ಯಕ್ಷ ಫಾರೂಕ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಜಯಪ್ರಕಾಶ್, ಗೌರವಾಧ್ಯಕ್ಷ ಷಣ್ಮುಖಸ್ವಾಮಿ, ಉಪಾಧ್ಯಕ್ಷ ಸರ್ದಾರ್, ಕಾರ್ಯದರ್ಶಿ ರೋಷನ್ ಕುಮಾರ್, ಖಜಾಂಚಿ ಸಿ.ಪ್ರಸಾದ್ ಕುಮಾರ್, ನಿರ್ದೇಶಕರಾದ ನವೀನ್ ಕುಮಾರ್, ವಸಂತ್ ಕುಮಾರ್, ಜಿ.ಆರ್.ರಘು, ಡಿ.ರಘುನಾಥ್, ರಕ್ಷಿತ್ ಕುಮಾರ್ ಮತ್ತಿತರರಿದ್ದರು