ವಿದ್ಯಾರ್ಥಿಗಳು ಗುರಿಗೆ ಪೂರಕವಾಗಿ ಶಿಕ್ಷಣ ಪಡೆದುಕೊಳ್ಳಲಿ

ವಿದ್ಯಾರ್ಥಿಗಳು ಗುರಿಗೆ ಪೂರಕವಾಗಿ ಶಿಕ್ಷಣ ಪಡೆದುಕೊಳ್ಳಲಿ
Published on

ಹಾಸನ: ಜೀವನದಲ್ಲಿ ಏನಾಗಬೇಕು ಎಂಬ ಗುರಿಯೊಂದಿಗೆ ಯುವಕರು ಶಿಕ್ಷಣ ಪಡೆದುಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ರೋಟರಿ ವಲಯ 9ರ ಮಾಜಿ ಸಹಾಯಕ ಗೌವರ್ನರ್ ಹಾಗೂ ವೈದ್ಯೆ ಡಾ.ಸೌಮ್ಯಾಮಣಿ ಹೇಳಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಭಾನುವಾರ ಅಕ್ಷರ ಬುಕ್ ಹೌಸ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕಳೆದ ಸಾಲಿನ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಕ್ಷರ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಜನತೆ ತಾವು ಏನಾಗಬೇಕೆಂಬ ಗುರಿಯಿಟ್ಟುಕೊಂಡು ಅದಕ್ಕೆ ಪೂರಕವಾಗಿ ಶಿಕ್ಷಣ ಪಡೆದುಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಸಮಾಜದಲ್ಲಿ ಸಾಧನೆ ಮಾಡಲು ಸಹಾಯಕವಾಗುತ್ತದೆ. ಯುವಪೀಳಿಗೆಗೆ ಹೆಚ್ಚು ಮೊಬೈಲ್ ಬಳಕೆ ಮಾಡುವ ಮೂಲಕ ಜೀವನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದರು.

ಜೀವನದಲ್ಲಿ ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಬೇಕಾದರೆ ಆರೋಗ್ಯ ಕಾಪಾಡಿಕೊಳ್ಳಬೇಕಾಗಿರುವುದು ಅಷ್ಟೇ ಮುಖ್ಯ. ಹಾಗಾಗಿ ಯೋಗ, ಧ್ಯಾನ, ಏಕಾಗ್ರತೆಯಿಂದ ಇರುವುದನ್ನು ಮೈಗೂಡಿಸಿಕೊಳ್ಳುವುದು ಅಗತ್ಯ ಎಂದರು.

ಉದ್ಯಮಿ ವಿಜಯಕುಮಾರ್ ಮಾತನಾಡಿ, ಸಮಾಜದ ಮುಂದಿನ ಆಧಾರಸ್ತಂಭವಾಗಿರುವ ಮಕ್ಕಳಿಗೆ ಪುಸ್ತಕಗಳನ್ನು ನೀಡುವುದರ ಮೂಲಕ ಸ್ವಸ್ಥ ಸಮಾಜ ನಿರ್ಮಾಣಮಾಡುವ ಕನಸನ್ನು ಅಕ್ಷರ ಬುಕ್ ಹೌಸ್‌ನ ತಂಡ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಕ್ಷರ ಬುಕ್ ಹೌಸ್ ಮಾಲೀಕ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್‌ನ ಅಧ್ಯಕ್ಷ ಟೈಮ್ಸ್ ಗಂಗಾಧರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಪಡೆದವರಿಗೆ ಪ್ರತಿ ವರ್ಷ ಲಕ್ಷ್ಷಾಂತರ ರೂ. ವೆಚ್ಚ ಮಾಡಿ ಪುಸ್ತಕಗಳನ್ನು ನೀಡಲಾಗುತ್ತಿದೆ. ಸಾಮಾನ್ಯ ಶಿಕ್ಷಕರ ಮಗನಾಗಿ ಓದಿ ಭೌತಶಾಸ್ತ್ರ ಉಪನ್ಯಾಸಕನಾಗಿ, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಅಕ್ಷರ ಬುಕ್ ಹೌಸ್ ಹಾಗೂ ಅಕ್ಷರ ಅಕಾಡೆಮಿಗಳನ್ನು ಸ್ಥಾಪಿಸಿ ಯುವ ಸಮುದಾಯಕ್ಕೆ ಓದಿನ ಆಸಕ್ತಿ ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕಳೆದ ಸಾಲಿನ ಹೆಚ್ಚು ಅಂಕ ಪಡೆದ ಸುಮಾರು 400 ವಿದ್ಯಾರ್ಥಿಗಳಿಗೆ ವಿವಿಧ ಲೇಖಕರ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಸರ್ಕಾರಿ ಕಾಲೇಜು ಹಾಗೂ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಹಾಗೂ ಉಪನ್ಯಾಸಕರು, ಅಧ್ಯಾಪಕರನ್ನು ಗೌರವಿಸಲಾಯಿತು.

ರೋಟರಿ ವಲಯ 9ರ ಸಹಾಯಕ ಗೌವರ್ನರ್ ಮಂಜುನಾಥ್, ವಲಯ ಸೇನಾನಿ ಮಮತಾ ಪಟೇಲ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಕಾರ್ಯದರ್ಶಿ ರವಿ ಕುಮಾರ್, ಖಜಾಂಚಿ ಎಚ್.ಕೆ.ದಿಲೀಪ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net