

ಬೆಟ್ಟದಪುರ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಬರುವಂತಹ ಪರೀಕ್ಷೆಗಳನ್ನು ಹಬ್ಬದಂತೆ ಆಚರಿಸಿ, ಸಂಭ್ರಮಿಸುವ ಮೂಲಕ ಜಯಗಳಿಸಬೇಕು ಎಂದು ಅಂತಾರಾಷ್ಟ್ರೀಯ ಜೀವನ ಮಾರ್ಗದರ್ಶಕ ಹಾಗೂ ಬರಹಗಾರ ಆರ್.ಎ. ಚೇತನ್ ರಾಮ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಡಿ.ತಮ್ಮಯ್ಯ ಸ್ಮಾರಕ ನವೋದಯ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪರೀಕ್ಷಾ ಪೂರ್ವ ಸಿದ್ಧತೆಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಶಿಸ್ತು, ಸಂಯಮ, ಗುರಿ, ಪರಿಶ್ರಮ ಹಾಗೂ ವಿನಯತೆ ವಿದ್ಯಾರ್ಥಿಗಳ ಬದುಕಿನ ಪಂಚಸೂತ್ರಗಳು. ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯ ಬಂಗಾರವಾಗುತ್ತದೆ ಎಂದರು.
ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತಾರೆ. ವರ್ಷವಿಡೀ ಓದಿರುವುದನ್ನು ಮೂರು ಗಂಟೆಯಲ್ಲಿ ಬರೆಯುವ ಆತಂಕದಿಂದ ಎಲ್ಲವನ್ನೂ ಮರೆಯುವ ಅಸಹಾಯಕ ನೋವಿಗೆ ತುತ್ತಾಗುತ್ತಾರೆ. ಪರೀಕ್ಷೆ ಎನ್ನುವುದು ಹಲವರಿಗೆ ರಣರಂಗವಾಗುತ್ತದೆ. ಈ ಮನೋಭಾವನೆ ಬದಲಾಗಬೇಕು. ಪರೀಕ್ಷೆಯನ್ನು ಖುಷಿಯಿಂದ ಎದುರಿಸಬೇಕು. ಹೇಗೆ ಸಂತಸದಿಂದ ಪಿಕ್ನಿಕ್‌ಗೆ ತೆರಳುತ್ತಾರೆಯೋ, ಅದೇ ರೀತಿ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ಕೆಲವು ಸರಳ ಸೂತ್ರಗಳನ್ನು ಪಾಲಿಸಿದರೆ ಪರೀಕ್ಷೆ ಎನ್ನುವುದು ಹಬ್ಬವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಶ್ರೀಶೈಲ, ಆಡಳಿತಾಧಿಕಾರಿ ನಟರಾಜ್, ಖಜಾಂಚಿ ಪಿ.ರವಿ, ನಿರ್ದೇಶಕ ವಿಜಯಕುಮಾರ್, ಸಿ.ಟಿ. ಗುರುದತ್, ಪ್ರಾಂಶುಪಾಲ ಸತೀಶ್, ಮುಖ್ಯಶಿಕ್ಷಕ ಮುರಳಿಕೃಷ್ಣ, ಜಯಂತಿ ಸೇರಿದಂತೆ ಶಿಕ್ಷಕ ವರ್ಗ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.