ವಿದ್ಯಾರ್ಥಿಗಳು ಸುಸಂಸ್ಕೃತ ನಡವಳಿಕೆ ಬೆಳೆಸಿಕೊಳ್ಳಲಿ

kota.me.9 koteshwara.p
Published on

ಕೋಟ: ವಿದ್ಯಾರ್ಥಿಗಳು ಗುರುಗಳಿಂದ ಸರಿಯಾದ ಜ್ಞಾನಾರ್ಜನೆಯೊಂದಿಗೆ ಲಭ್ಯ ಅವಕಾಶಗಳ ಸದ್ಬಳಕೆಯಿಂದ ತಮ್ಮ ಕೌಶಲ, ಪ್ರತಿಭೆಯನ್ನು ಪರಿಶ್ರಮ, ನಿಷ್ಠೆಯಿಂದ ಉದ್ದೀಪನಗೊಳಿಸಿಕೊಂಡರೆ ತಾವು ಗಳಿಸಿದ ವಿದ್ಯೆಯ ವರ್ಚಸ್ಸು ಅಧಿಕವಾಗುತ್ತದೆ. ವಿದ್ಯಾರ್ಥಿಗಳು ಶಿಸ್ತುಬದ್ಧರಾಗಿ ಉತ್ಸಾಹದಿಂದ ಆಲಿಸುವ ಮನೋಭಾವ ಹಾಗೂ ಸುಸಂಸ್ಕೃತ ನಡವಳಿಕೆ ಹೊಂದುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು ಎಂದು ಉಡುಪಿ ಆಕಾಶ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಉಪನ್ಯಾಸಕ ಹಾಗೂ ಯಕ್ಷಗಾನ ಕಲಾವಿದ ಡಾ.ಪ್ರದೀಪ ವಿ.ಸಾಮಗ ಹೇಳಿದರು.

ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ‘ಸಿಂಚನ’ ಅಂತರ್ ತರಗತಿ ಪ್ರತಿಭಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ತೃತೀಯ ಬಿ.ಕಾಂ. ವಿದ್ಯಾರ್ಥಿ ಕಾವ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಸಾಂಸ್ಕೃತಿಕ ಸಂಚಾಲಕಿ ಡಾ.ಭಾಗೀರಥಿ ನಾಯ್ಕ ಸ್ವಾಗತಿಸಿದರು. ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಸ್ವರ್ಣಿತಾ ವಂದಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಐಕ್ಯೂಎಸಿ ಸಂಚಾಲಕ ನಾಗರಾಜ ಯು. ಉಪಸ್ಥಿತರಿದ್ದರು. ಆಂಗ್ಲಭಾಷಾ ಪ್ರಾಧ್ಯಾಪಕ ನಿರಂಜನ ಶರ್ಮ ಅತಿಥಿ ಪರಿಚಯ ಮಾಡಿದರು. ಕನ್ನಡ ಉಪನ್ಯಾಸಕಿ ಪ್ರೇಮಲಾಕ್ಷಿ ಕೆ.ಬಿ. ನಿರ್ಣಾಯಕರನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ವೇತಾ ಕುಮಾರಿ ನಿರೂಪಿಸಿದರು.

ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಗಿರಿಯಪ್ಪ, ಉಪನ್ಯಾಸಕರಾದ ಅಮಿತ ಕ್ರಮದಾರಿ ಹಾಗೂ ವಿದುಷಿ ಅರ್ಪಿತಾ ಹೆಗಡೆ ತೀರ್ಪುಗಾರಾಗಿದ್ದರು. ಎಂ.ಕಾಂ. ತರಗತಿ, ತೃತೀಯ ಬಿ.ಕಾಂ., ಬಿ.ಸಿ.ಎ. ತರಗತಿಯವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಹಾಗೂ ಸಮಗ್ರ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net