ಪುಸ್ತಕ ಓದುವ ಅಭಿರುಚಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಲಿ

12-04-rama-Book realease
Published on

* ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೆ.ಸತೀಶ್ ಅನಿಸಿಕೆ

ರಾಮನಗರ

ಸ್ವಾಸ್ಥ್ಯ ಸಮಾಜಕ್ಕೆ ಬೇಕಾದ ಉತ್ತಮ ಸಂದೇಶಗಳನ್ನು ಸಾಹಿತ್ಯ ಕೃತಿಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದಾಗ ಅಂತಹ ಸಾಹಿತಿಯು ಓದುಗರ ಮನಸಿನಲ್ಲಿ ಉತ್ತಮ ಸ್ಥಾನ ಗಳಿಸುತ್ತಾರೆ ಎಂದು ಚನ್ನಪಟ್ಟಣ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಉಷಾಮಾಲಿನಿ ಅಭಿಪ್ರಾಯಪಟ್ಟರು.

ನಗರದ ಶಾಂತಿನಿಕೇತನ ಸಮೂಹ ಸಂಸ್ಥೆಗಳ ಆವರಣದಲ್ಲಿ ತನ್ಮಯ್ ಹೇಮಾದ್ರಿ ಸಿರಿ ಸಾಂಸ್ಕೃತಿಕ ಸಾಮಾಜಿಕ ವೇದಿಕೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾಧ್ಯಾಪಕ ಹಾಗೂ ಸಾಹಿತಿ ವಿ .ಎಚ್.ರಾಜಶೇಖರ್ ಅವರ ಕಾವ್ಯ ಕನ್ನಿಕೆ ಕೃತಿ ಬಿಡುಗಡೆ ಮತ್ತು ಚಿಗುರಿದಮನ ಹಾಗೂ ಮನದ ಪಾಡು ಕೃತಿಗಳ ಮರುಮುದ್ರಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉತ್ತಮ ಸಮಾಜ ನಿರ್ಮಾಣಕ್ಕೆ ಬೇಕಾದ ಸಂದೇಶಗಳನ್ನು ತಮ್ಮ ಕವನಗಳು ಮತ್ತು ಲೇಖನಗಳ ಮೂಲಕ ಓದುಗರಿಗೆ ನೀಡುತ್ತಿರುವ ಸಾಹಿತಿ ರಾಜಶೇಖರ್ ಅವರು ವಿದ್ಯಾರ್ಥಿಗಳಿಗೆ ಮಾದರಿಯ ಪ್ರಾಧ್ಯಾಪಕರಾಗಿದ್ದಾರೆ. ಹಾಗೂ ಅವರ ನಿರಂತರ ಅಧ್ಯಯನ ಪ್ರೌವೃತ್ತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ. ಅವರು ವೃತ್ತಿ ಬದುಕಿನುದ್ದಕ್ಕೂ ಅತ್ಯುತ್ಯಮ ಸಾಹಿತ್ಯ ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಂತಿ ನಿಕೇತನ ಸಮೂಹ ಸಂಸ್ಥೆಗಳ ಸಂಸ್ಥಾಪಕ ಆರ್.ಕುಮಾರಸ್ವಾಮಿ ಮಾತನಾಡಿ, ಯಾವುದೆ ಒಂದು ಕೃತಿ ಎರಡನೇ ಮುದ್ರಣ ಕಾಣುತ್ತಿದೆ ಎನ್ನುವುದು ಕೃತಿಗೆ ಇರುವ ಮೌಲ್ಯವನ್ನು ತೋರಿಸುತ್ತದೆ. ಇಂತಹ ಕೃತಿಗಳನ್ನು ಇಂದಿನ ಯುವ ಸಮುದಾಯ ಅಧ್ಯಯನ ಮಾಡಬೇಕು ಎಂದರು.

ಕಾವ್ಯ ಕನ್ನಿಕೆ ಕೃತಿ ಬಿಡುಗಡೆ ಮಾಡಿದ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೆ.ಸತೀಶ್ ಮಾತನಾಡಿ, ಪುಸ್ತಕ ಅಭಿರುಚಿ ಕಡಿಮೆಯಾಗುತ್ತಿರುವ ದಿನಗಳಲ್ಲಿ, ಸಾಹಿತ್ಯ ಕಾಲೇಜು ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡಬೇಕಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ಪ್ರತಿಯೊಬ್ಬರು ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಮಾತನಾಡಿ, ದಿನೇದಿನೆ ಸಾಹಿತ್ಯ ಕ್ಷೇತ್ರದಲ್ಲಿ ಜನ ಸಾಮಾನ್ಯರಿಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಸಾಹಿತ್ಯ ಕಾರ್ಯಕ್ರಮಗಳಿಗೆ ಶಾಲಾ- ಕಾಲೇಜುಗಳ ಆಶ್ರಯ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಂದು ಬರವಣಿಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿದ್ದರೂ ಮುದ್ರಣದ ದುಬಾರಿ ವೆಚ್ಚವು ಪುಸ್ತಕ ಮುದ್ರಿಸುವ ಆಸಕ್ತಿಯನ್ನು ಕುಂದಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹಣವುಳ್ಳವರು ಸಹಾಯಹಸ್ತ ನೀಡಬೇಕಾಗಿದೆ ಕಿವಿಮಾತು ಹೇಳಿದರು.

ಸಾಹಿತಿ ಪುಟ್ಟಸ್ವಾಮಿಗೌಡ, ಪ್ರಾಧ್ಯಾಪಕ ಡಾ.ಪ್ರಭು ವಿ.ಉಪಾಸೆ, ಉಪನ್ಯಾಸಕ ಜಿ.ಶಿವಣ್ಣ ಕೃತಿಗಳ ಕುರಿತು ಮಾತನಾಡಿದರು. ಕೋವಿಡ್ ಸಮಯದಲ್ಲಿ ಆರೋಗ್ಯ ಸೇವೆ ನೀಡಿದ ಕೆ.ಎನ್.ಅನಸೂಯ ಅವರಿಗೆ ಆರೋಗ್ಯ ಸೇವಾ ಕನ್ನಿಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಾಯಕ ಕೆಂಗಲ್ ವಿನಯ್ ಕುಮಾರ್ ಗೀತಗಾಯನ ನಡೆಸಿಕೊಟ್ಟರು. ಉಪನ್ಯಾಸಕ ವೆಂಕಟಾಚಲಯ್ಯ, ಸಾಹಿತಿ ವಿ.ಎಚ್.ರಾಜಶೇಖರ್, ಮಾಜಿ ಶಾಸಕ ಕೆ.ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net