ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಅಳವಡಿಸಿಕೊಳ್ಳಲಿ

25 SARAG 2
Published on

ಸರಗೂರು: ಉತ್ತಮ ಪ್ರಜೆಗಳಾಗಲು ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿಗಳು ಅರಿತು ಅಳವಡಿಸಿಕೊಳ್ಳಬೇಕು ಎಂದು ಸರಗೂರು ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಸಲಹೆ ನೀಡಿದರು.

ಪಟ್ಟಣದ ಸಮೀಪದ ತುಂಬಸೋಗೆ ಗ್ರಾಮದಲ್ಲಿರುವ ಎಂಎಂಕೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಬಾಲ್ಯ ವಿವಾಹ ನಿಷೇಧ, ಮಕ್ಕಳ ಲೈಂಗಿಕ ಅಪರಾಧಗಳ ಕಾಯ್ದೆ ಬಗ್ಗೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ಶಾಲಾ ಆಡಳಿತ ಮಂಡಳಿ ನಿಗಾ ವಹಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಈಗಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಮೊಬೈಲ್ ಆ್ಯಪ್‌ಗಳು ಮಕ್ಕಳ ಖಾಸಗಿ ಮಾಹಿತಿ ಕದ್ದು ಬ್ಲಾೃಕ್‌ಮೇಲ್ ಮಾಡಿ ಸುಲಿಗೆ ಮಾಡುವುದು ಹೆಚ್ಚುತ್ತಿದೆ. ಹಾಗಾಗಿ, ಶಾಲಾ ಆಡಳಿತ ಮಂಡಳಿ ಮತ್ತು ಪಾಲಕರು ವಿದ್ಯಾರ್ಥಿಗಳ ಮೊಬೈಲ್‌ಗಳನ್ನು ಆಗಾಗ ಗಮನಿಸುತ್ತಿರಬೇಕು.ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. 28-30 ವರ್ಷ ವಯೋಮಾನದ ಬಳಿಕ ಮದ್ಯಪಾನ, ಧೂಮಪಾನಕ್ಕೆ ಒಳಗಾಗುತ್ತಿದ್ದರು. ಆದರೆ, ಇತ್ತೀಚೆಗೆ 17-18 ವರ್ಷ ವಯೋಮಾನದವರು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಇವರು ಸಾಮಾನ್ಯ ವ್ಯಕ್ತಿಗಿಂತ 3 ಪಟ್ಟು ಹೆಚ್ಚು ಕಾಯಿಲೆಗಳಿಗೆ ಒಳಗಾಗಿ ಸಾವು ಬೇಗ ಸಂಭವಿಸುತ್ತದೆ ಎಂದರು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡುವುದು ಅಪರಾಧ. ಇಂತಹ ಪ್ರಕರಣದಲ್ಲಿ ಪಾಲಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತು ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ವಿದ್ಯಾರ್ಥಿಗಳು ಯಾವುದೇ ತೊಂದರೆಗೆ ಸಿಲುಕಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಹೊಸ ಆ್ಯಪ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಆದರೆ, ಅದರ ದುಷ್ಪರಿಣಾಮಗಳ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ. ಒಮ್ಮೆ ಈ ಜಾಲತಾಣಗಳಿಗೆ ಸಿಲುಕಿದರೆ ಆಚೆ ಬರುವುದು ಕಷ್ಟಸಾದ್ಯ. ಇಂಥವುಗಳನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದರು.

ಪೋಕ್ಸೊ ಕಾಯ್ದೆ, ಮಾದಕ ವಸ್ತುಗಳ ಸೇವನೆ ಮಾರಾಟ ನಿಯಂತ್ರಣ ನಿಷೇಧ, ಮಕ್ಕಳ ಸಹಾಯವಾಣಿ 1098, ತುರ್ತು ಸಂದರ್ಭದಲ್ಲಿ 112 ಮತ್ತಿತರ ವಿಷಯಗಳ ಕುರಿತು ತಿಳಿಸಿದರು.

ಎಂಎಂಕೆ ಕಾಲೇಜು ಪ್ರಾಂಶುಪಾಲ ಪ್ರಕಾಶ್, ಸಿಬ್ಬಂದಿ ಆನಂದ, ಜಗದೀಶ್, ಕಾಲೇಜಿನ ಉಪನ್ಯಾಸಕರು ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net