ತಂಬಾಕು ನಿಯಂತ್ರಣಕ್ಕೆ ಸಮಾಜ ಕೈಜೋಡಿಸಲಿ

ತಂಬಾಕು ನಿಯಂತ್ರಣಕ್ಕೆ ಸಮಾಜ ಕೈಜೋಡಿಸಲಿ
Published on

ಕೆ.ಆರ್.ನಗರ: ತಂಬಾಕು ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರದೊಂದಿಗೆ ಪ್ರಜ್ಞಾವಂತ ನಾಗರಿಕರು ಕೈಜೋಡಿಸಿ ಕೆಲಸ ಮಾಡಬೇಕು ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಬಿ.ಸಿ.ಅರವಿಂದ ಹೇಳಿದರು.

ಪಟ್ಟಣದ ಆಲ್ಫಾ ಕಾಲೇಜಿನಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಮತ್ತು ಆಲ್ಫಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗುವುದರ ಜತೆಗೆ ಅದು ಸಮಾಜ ಮತ್ತು ಕುಟುಂಬದ ಮೇಲೆ ಮಾರಕ ಪರಿಣಾಮ ಬೀರಲಿದ್ದು, ಇದನ್ನು ಅರಿತು ವಿದ್ಯಾರ್ಥಿಗಳು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

15 ರಿಂದ 20 ವರ್ಷದೊಳಗಿನ ಯುವಕ ಮತ್ತು ಯುವತಿಯರು ಧೂಮಪಾನದ ಚಟಕ್ಕೆ ಒಳಗಾಗುತ್ತಿದ್ದು, ಹತ್ತರಲ್ಲಿ ಒಬ್ಬರು ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಎಲ್ಲರೂ ಸೇರಿ ಇದನ್ನು ತಡೆಯಬೇಕೆಂದು ಕರೆ ನೀಡಿದ ನ್ಯಾಯಾಧೀಶರು ಪಾಲಕರು ತಮ್ಮ ಮಕ್ಕಳ ಮೂಲಕ ತಂಬಾಕು ಉತ್ಪನ್ನಗಳನ್ನು ತರಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗಿದ್ದು, ಅದನ್ನು ವಿರೋಧಿಸಬೇಕು ಎಂದು ತಿಳಿಸಿದರು.

ಸಾಧನೆಗೆ ಶಿಸ್ತು ಅತ್ಯಂತ ಪ್ರಮುಖವಾಗಿದ್ದು, ಅದು ಮನುಷ್ಯನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ನುಡಿದ ಅವರು ಪಟ್ಟಣದ ಆಲ್ಫಾ ಕಾಲೇಜಿನ ವಿದ್ಯಾರ್ಥಿಗಳ ಶಿಸ್ತು ಮತ್ತು ಸಾಧನೆಯನ್ನು ಶ್ಲಾಘಿಸಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಚಂದನ್ ಮಾತನಾಡಿ, ತಂಬಾಕು ಸೇವನೆ ಜಾಗತಿಕ ಪಿಡುಗಾಗಿದ್ದು, ಜನತೆ ಅದರ ನಿರ್ಮೂಲನೆಗೆ ಕಂಕಣಬದ್ಧರಾಗಿ ಕೆಲಸ ಮಾಡಬೇಕು. ಯುವ ಜನತೆ ಆಕರ್ಷಣೆಗೆ ಒಳಗಾಗಿ ತಂಬಾಕು ಸೇವನೆ ಮಾಡಿ ಆನಂತರ ಅದನ್ನು ಚಟವನ್ನಾಗಿಸಿಕೊಂಡು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದು, ಈ ದುರಭ್ಯಾಸ ಬಿಟ್ಟು ಉತ್ತಮ ಹವ್ಯಾಸ ರೂಪಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಅದರಲ್ಲಿ ದೊರೆಯುವ ಉತ್ತಮ ಅಂಶಗಳನ್ನು ಸದ್ಭಳಕೆ ಮಾಡಿಕೊಂಡು ಯಶಸ್ಸು ಗಳಿಸುವಂತೆ ಸಲಹೆ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಡಿ.ನಟರಾಜು, ವಕೀಲ ರಾಮಚಂದ್ರರಾವ್ ಮತ್ತು ವಸಂತಕುಮಾರ್ ಅವರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು.

ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ, ಆಲ್ಫಾ ಕಾಲೇಜಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ನವೀನ್, ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ಶಿವಕುಮಾರ್, ರವಿಕುಮಾರ್, ಆರೋಗ್ಯ ಇಲಾಖೆಯ ಸಿಬ್ಬಂದಿ ಸಿ.ಎಂ.ರೇಖಾ, ಪಾರ್ವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net