

ಕೊಟ್ಟೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸಮನಾಗಿ ಸ್ವೀಕರಿಸಬೇಕು. ಆದರೆ, ಬೆದರಿಕೆ ಹಾಕುವುದು ರಾಜಕಾರಣಿಗಳ ಸಭ್ಯತೆಯಲ್ಲ ಎಂದು ಶಾಸಕ ನೇಮಿರಾಜ ನಾಯ್ಕ ಹೇಳಿದರು.
ತಾಲೂಕಿನ ಕೆ.ಅಯ್ಯನಹಳ್ಳಿ ಬಳಿ 2 ಕೋಟಿ ರೂ. ವೆಚ್ಚದ ಎಕ್ಕುಂಬಿ-ಮೊಳಕಾಲ್ಮೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಬಕೊವಿ ಹಾಲು ಒಕ್ಕೂಟದ ಅಧ್ಯಕ್ಷ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ನೋಡಿಕೊಳ್ತೀನಿ ಎಂದು ಮಾಜಿ ಶಾಸಕ ಭೀಮನಾಯ್ಕ ಬೆದರಿಕೆ ಹಾಕಿರುವುದು ಸರಿಯಲ್ಲ .ನಮ್ಮ ನಡತೆ ಇತರರಿಗೆ ಮಾದರಿಯಾಗಬೇಕು. ಅನಾಗರಿಕ ವರ್ತನೆ ಶೋಭೆ ತರುವಂತದ್ದಲ್ಲ ಎಂದರು.
ಪಟ್ಟಣದಲ್ಲಿ ನಡೆಯುವ ಕಳ್ಳತನ, ಅಪಘಾತ ಹಾಗೂ ಇತರೆ ಅವಘಡಗಳನ್ನು ಪತ್ತೆಹಚ್ಚಲು ಕೋಟಿ ರೂ. ವೆಚ್ಚದ ಸಿಸಿ ಕ್ಯಾಮರಾ ಅಳವಡಿಕೆಗೆ ಯೋಜನೆ ಅನುದಾನದ ಕೊರತೆಯಿಂದ ವಿಳಂಬವಾಗುತ್ತಿದ್ದು, ಶೀಘ್ರದಲ್ಲೇ ಅಳವಡಿಸಲಾಗುವುದು. ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ ಮರಿಯಮ್ಮನಹಳ್ಳಿಯಲ್ಲಿ ಹೈಮಾಸ್ಟ್ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ ಎಂದರು.