

* ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಸಲಹೆ
* ರಾಜ್ಯೋತ್ಸವ ಪುರಸ್ಕಾರ ಪ್ರದಾನ
ರಾಮನಗರ
ನಮ್ಮ ನಡುವೆ ಎಷ್ಟೋ ಸಾಧಕರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರು ಇನ್ನೂ ಕೂಡಾ ತೆರೆಮರೆಯಲ್ಲೇ ಇದ್ದಾರೆ. ಎಲ್ಲರಿಗೂ ಸರ್ಕಾರವೇ ಪ್ರಶಸ್ತಿ ನೀಡಿ ಗೌರವಿಸುವುದು ಕಷ್ಟ. ಹಾಗಾಗಿ ಸಂಘ-ಸಂಸ್ಥೆಗಳು ಆ ಕಾರ್ಯ ಮಾಡಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕ್ಷ ಕೆ.ಸತೀಶ್ ಹೇಳಿದರು.
ಸಂಸ್ಕೃತಿ ಸೌರಭ ಟ್ರಸ್ಟ್ ರಾಮನಗರದ ಕನ್ನಿಕಾ ಮಹಲ್ ನಲ್ಲಿ ಆಯೋಜಿದ್ದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯೋತ್ಸವ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಚಲನಚಿತ್ರ ನಿರ್ದೇಶಕ ನಾಗರಾಜ್ ಕೋಟೆ, ಇವತ್ತಿನ ಮೊಬೈಲ್ ಜಗತ್ತಿನಲ್ಲಿ ಸದಭಿರುಚಿ ಪ್ರೇಕ್ಷಕರ ಕೊರತೆ ಇದೆ. ಇಷ್ಟು ಜನ ಇಲ್ಲಿ ಈ ಕಾರ್ಯಕ್ರಮಕ್ಕೆ ಬಂದಿದ್ದೀರಿ ಎಂದರೆ, ವೇದಿಕೆ ಮುಂಭಾಗದಲ್ಲಿರುವ ನೀವುಗಳೂ ಅತಿಥಿಗಳೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ವೇದಿಕೆಯಲ್ಲಿ ಇಂದು ಪುರಸ್ಕಾರಕ್ಕೆ ಭಾಜನರಾಗಿರುವ ಎಕ್ಕರೂ ದೊಡ್ಡ ಸಾಧಕರೇ ಎಂದರು.
ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಮಾತನಾಡಿ, ನಮ್ಮ ನಡುವೆ ಎಷ್ಟೋ ಸಂಘ-ಸಂಸ್ಥೆಗಳು ನಾನಾ ಕಾರಣಕ್ಕಾಗಿ ಉದಯವಾಗುತ್ತವೆ. ಆದರೆ, ಅಷ್ಟೇ ವೇಗದಲ್ಲಿ ಕಣ್ಮರೆಯಾಗುತ್ತವೆ. ಆದರೆ, ಸಂಸ್ಕೃತಿ ಸೌರಭ ಟ್ರಸ್ಟ್ ರಾಮನಗರ ಮಾತ್ರವಲ್ಲದೆ ಬೇರೆಬೇರೆ ವಿಭಾಗಗಳಲ್ಲಿಯೂ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರತ್ತಿವೆ. ನಿಜಕ್ಕೂ ಇವರ ನಿಸ್ವಾರ್ಥ ಕಳಕಳಿ ಶ್ಲಾಘನೀಯ ಎಂದರು.
ರಂಗಭೂಮಿ ನಟ ಡಾ.ಎಚ್.ವಿ.ಮೂರ್ತಿ, ಡಿ.ದೇವರಾಜ ಅರಸು ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಎಚ್.ಸುರೇಶ್, ಗ್ರಾಪಂ ಮಾಜಿ ಸದಸ್ಯ ಕೂನಮುದ್ದನಹಳ್ಳಿ ರುದ್ರೇಶ್, ಆಧ್ಯಾತ್ಮಿಕ ಚಿಂತಕರಾದ ಗೋಪಾಲ ಸ್ವಾಮಿ ಉಪಸ್ಥಿತರಿದ್ದರು.
ನಿವೃತ್ತ ಯೋಧ ಎಂ.ರಂಗನಾಥ್, ರಾಜ್ ಮಕ್ಕಳ ಚಿಕಿತ್ಸಾಲಯದ ವೈದ್ಯೆ ಡಾ.ರಾಜಶ್ರೀ, ಸಮಾಜ ಸೇವಕ ಪಿ.ವಿ.ಪ್ರಭಾಕರ ಶೆಟ್ಟಿ, ಕುಸ್ತಿ ಪಟು, ಕೆ.ಎನ್.ವಿಜಯಕುಮಾರ್, ಸ್ನೇಹಕಲಾ ಪ್ರತಿಷ್ಠಾನದ ಅಧ್ಯಕ್ಷ ಕುಣಿಗಲ್ ದಿನೇಶ್ ಕುಮಾರ್, ಹಿರಿಯ ಹಾರ್ಮೋನಿಯಂ ಮಾಸ್ಟರ್ ನಾಗರಾಜಯ್ಯ, ವಕೀಲರಾದ ಎಸ್.ನಾಗರಾಜು, ಆಧ್ಯಾತ್ಮಿಕ ಚಿಂತಕ ಮೆಣಸಿಗನಹಳ್ಳಿ ಪ್ರಸನ್ನ ಗವಿಮಠದ ಶ್ರೀನಿವಾಸ್ ಅವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗಾಯಕರಾದ ಎಸ್.ರಘುನಾಥ್, ರಾಧಾಕೃಷ್ಣ ಸಾಗರ, ಕೆಂಗಲ್ ವಿನಯ್ ಕುಮಾರ್, ಬೊಮ್ಮನಹಳ್ಳಿ ಗೋಪಾಲ್, ಸೌಜನ್ಯ ಕೃಷ್ಣಮೂರ್ತಿ, ಹರ್ಷವರ್ಧನ್ ಹಾಗೂ ವಿಜಯೇಂದ್ರ ಪ್ರಸಾದ್ ನೇತೃತ್ವದ ನೂಪುರ ಸಂಗೀತದ ಸಂಜಿತ್, ವಿನ್ಯಂತ್, ಧೀಕ್ಷಿತ್, ಗೀತ ಗಾಯನ ನಡೆಸಿಕೊಟ್ಟರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜಶೇಖರ ಎಸ್.ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ನ ಕಾರ್ಯದರ್ಶಿ ಎಚ್.ಬಿ.ಸಿದ್ಧರಾಜು ವಂದಿಸಿದರು.