ಸಚಿವ ರಾಜಣ್ಣ ಸ್ವಾಮೀಜಿ ಕ್ಷಮೆಯಾಚಿಸಲಿ

Rmgm-Ph-01-Taluk Okkaligara Sanga Pressmeet News-Photo- Rmgm-29-6-2024
Published on

ರಾಮನಗರ :ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಕೂಡಲೇ ಒಕ್ಕಲಿಗ ಸಮಾಜದ ಕ್ಷಮೆಯಾಚಿಸಬೇಕು ಎಂದು ರಾಮನಗರ ತಾಲೂಕು ಒಕ್ಕಲಿಗರ ಸಂಘ ಉಪಾಧ್ಯಕ್ಷ ಚನ್ನಮಾನಹಳ್ಳಿ ಅಪ್ಪಾಜಣ್ಣ (ರೇವಲಿಂಗಯ್ಯ) ಆಗ್ರಹಿಸಿದರು.

ರಾಮನಗರದ ತಾಲ್ಲೂಕು ಒಕ್ಕಲಿಗರ ಸಂಘದ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಸಚಿವ ಕೆ.ಎನ್. ರಾಜಣ್ಣರವರು ಒಕ್ಕಲಿಗ ನಾಯಕರು ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಅಧಿಕಾರದ ಅಹಂನಿಂದ ಬಾಯಿಗೆ ಬಂದಂತೆ ಸಚಿವ ಸ್ಥಾನದಲ್ಲಿ ಇದ್ದೇನೆಂಬ ಪರಿವೂ ಇಲ್ಲದೆ ಮನಬಂದಂತೆ ಮಾತನಾಡುವುದು ಸರಿಯಲ್ಲ. ತಾವು ಆಡಿರುವ ಮಾತಿನ ತಪ್ಪನ್ನು ತಿದ್ದುಕೊಂಡು ಶ್ರೀಗಳಲ್ಲಿ ಕ್ಷಮೆಯಾಚನೆ ಮಾಡಬೇಕು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಒಂದು ಸಮುದಾಯ ಮಾತ್ರವಲ್ಲದೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡುವಂತೆ ಹೇಳಿರುವುದು ಶ್ರೀಗಳ ಮನದಾಳದ ಅನಿಸಿಕೆ ಇರಬಹುದು.

ಭಕ್ತರ ಮನಸ್ಥಿತಿಗೆ ತಕ್ಕಂತೆ ಶ್ರೀಗಳು ಆಶೀರ್ವಾದ ಮಾಡುತ್ತಾರೆ. ಆ ರೀತಿ ಡಿ.ಕೆ.ಶಿವಕುಮಾರ್ ರವರ ಮನಸ್ಥಿತಿಯನ್ನು ಅರಿತಿದ್ದ ಶ್ರೀಗಳು ಮುಖ್ಯಮಂತ್ರಿಯಾಗಲು ಅವಕಾಶನೀಡುವಂತೆ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಸಂಘದ ನಿರ್ದೇಶಕ ಸಿ. ಶಿವಸ್ವಾಮಿ ಮಾತನಾಡಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ತಲೆ ಕೆಟ್ಟಿದೆ. ಸಚಿವ ಸ್ಥಾನ ಬಿಟ್ಟು ಸ್ವಾಮೀಜಿ ಆಗುವುದಾದರೆ ಬರಲಿ, ನಾವೇ ರಾಮನಗರ ತಾಲೂಕಿನಲ್ಲಿ ಒಂದು ಎಕರೆ ಜಮೀನು ಕೊಡಿಸಿ ಮಠ ಕಟ್ಟಿ ಕೊಡುತ್ತೇವೆ. ಒಕ್ಕಲಿಗರನ್ನು ಅವಹೇಳನ ಮಾಡಿದರೆ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಮರಿಸ್ವಾಮಯ್ಯ, ಕಾರ್ಯದರ್ಶಿ ಎಂ. ರೇವಣ್ಣ, ನಿರ್ದೇಶಕರಾದ ಸಿ.ಶಿವಸ್ವಾಮಿ, ಪಿ.ಜಯರಾಮು, ಹನುಮೇಶ್, ಪಿ. ಗಂಗರಾಜು, ಕೆ.ಭದ್ರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net