

ಹಾಸನ: ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೂ ಕನ್ನಡ ಮನೆ, ಮನದ ಭಾಷೆಯಾಗಬೇಕು ಎಂದು ಪತ್ರಕರ್ತ ಮಂಜು ಬನವಾಸೆ ಹೇಳಿದರು.
ನಗರದ ಎಲೈಟ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ವೃತ್ತಿಪರ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ಪಾಲಕರು, ಮಕ್ಕಳು ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನೇ ಬಯಸುತ್ತಿದ್ದಾರೆ. ಇದರ ಪರಿಣಾಮ ಕನ್ನಡ ಭಾಷೆಯ ಮೇಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಅವಶ್ಯಕವೇ ಆಗಿದ್ದರೂ ಮಕ್ಕಳು ಮನಸ್ಸು, ಮನೆಯಲ್ಲಿ ಕನ್ನಡದಲ್ಲಿ ಮಾತನಾಡಲು ಯಾರೂ ಅಡ್ಡಿಪಡಿಸುವುದಿಲ್ಲ. ಕನ್ನಡದಲ್ಲಿ ಯೋಚಿಸಿ ಮನೆಯಲ್ಲಿ ಕನ್ನಡ ಮಾತನಾಡುವ ಮೂಲಕ ನಮ್ಮ ಮಾತೃಭಾಷೆ, ನೆಲದ ಸಂಸ್ಕೃತಿಯನ್ನು ಕಾಪಾಡಬೇಕೆಂದರು.
ಶಾಲೆಯ ಖಜಾಂಚಿ ಸಪ್ನ್ನಾ ಕಿರಣ್ ಮಾತನಾಡಿ, ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಕನ್ನಡ ಭಾಷೆಯ ಬರವಣಿಗೆ, ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಕನ್ನಡದ ರಕ್ಷಣೆ ಕನ್ನಡಿಗರ ಜವಾಬ್ದಾರಿ ಎಂದರು.
ಶಾಲೆಯ ಆಡಳಿತಾಧಿಕಾರಿ ನಾಗರಾಜ್ ಮಾತನಾಡಿ, ಕನ್ನಡ ಸಂಸ್ಕೃತಿಯ ರಕ್ಷಣೆ, ಬೆಳವಣಿಗೆ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳ ಕೈಯಲ್ಲಿದೆ. ಕನ್ನಡ ಎಂದರೆ ಬರಿ ಮಾತನಾಡುವುದಷ್ಟೇ ಅಲ್ಲ, ಹೃದಯದ ಭಾಷೆಯಾಗಬೇಕು. ಆಂಗ್ಲ ಭಾಷೆಯನ್ನು ಎಷ್ಟೇ ಕಲಿತರೂ ಕನ್ನಡವನ್ನು ಮರೆಯಬಾರದು. ಕನ್ನಡ ನಾಡು ಸ್ವರ್ಗಕ್ಕಿಂತ ಮಿಗಿಲು. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಬಿಂಬಿಸುವ ಹಾಡುಗಳಿಗೆ ಆಕರ್ಷಕ ನೃತ್ಯ ಮಾಡುವ ಮೂಲಕ ಚಪ್ಪಾಳೆ ಗಿಟ್ಟಿಸಿದರು. ಶಾಲೆಯ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.